ಐಗೂರು, ಜ. ೧೧: ಐಗೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಎಂಬ ಕಾರ್ಯಕ್ರಮವನ್ನು ಸ್ಥಳೀಯ ಬ್ಯಾಂಕ್ ಆಫ್ ಬರೋಡ ಐಗೂರು ಶಾಖೆ ವತಿಯಿಂದ ಆಯೋಜಿಸಲಾಗಿತ್ತು. ಬ್ಯಾಂಕಿನ ಶಾಖೆಯ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳಿಸಲಾಯಿತು.
ಕೇಂದ್ರ ಸರ್ಕಾರದ ಸಾಧನೆಗಳನ್ನು ಸವಿಸ್ತಾರವಾಗಿ ಜನರಿಗೆ ತಿಳಿಸುವ ಸಲುವಾಗಿ ಸ್ಥಳೀಯ ಬ್ಯಾಂಕಿನ ಮುಂಭಾಗದಲ್ಲಿ ಬೃಹತ್ ಆಕಾರದ ಎಲ್ಇಡಿ ಪರದೆಯನ್ನು ಅಳವಡಿಸಿ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ಇತರ ಯೋಜನೆಗಳ ಮಾಹಿತಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಆನಂದ ಬಾಬು ಅವರು ಸಭಿಕರನ್ನುದ್ದೇಶಿಸಿ ಪ್ರಧಾನ ಮಂತ್ರಿ ಭೀಮಾ ಯೋಜನೆ, ಮುದ್ರಾ ಸಾಲದ ಯೋಜನೆ, ಅಟಲ್ ಪೆನ್ಷನ್ ಯೋಜನೆಯ ಸೌಲಭ್ಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಐಗೂರು ಗ್ರಾ.ಪಂ. ಅಧ್ಯಕ್ಷ ವಿನೋದ್ ಅವರು ವಿಕಸಿತ ಭಾರತ ಸಂಕಲ್ಪ ಯೋಜನೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತರಿಗಾಗಿ ಏರ್ಪಡಿಸಿದ್ದ ಡ್ರೋನ್ ಮುಖಾಂತರ ಹೊಸ ತಂತ್ರಜ್ಞಾನವನ್ನು ತಿಳಿಸುವ ಸಲುವಾಗಿ ಡ್ರೋನ್ ಅನ್ನು ಎತ್ತರಕ್ಕೆ ಹಾರಿಸುವ ಪ್ರಾತ್ಯಕ್ಷತೆಯನ್ನು ನೀಡಲಾಯಿತು. ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿಗಳು, ಗ್ರಾ.ಪಂ. ಅಧ್ಯಕ್ಷ ವಿನೋದ್, ಪ್ರಾಥಮಿಕ ಕೃಷಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಡಿಕ್ಕಿ ರಾಜು, ಸಂಜೀವಿನಿ ಒಕ್ಕೂಟದ ಸುಜಾತ ಬಾಲಕೃಷ್ಣ ಹಾಗೂ ಇತರರು ಇದ್ದರು.