ತಾ. ೧೩ ರಿಂದ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಸೋಮವಾರಪೇಟೆ, ಜ. ೧೦: ಅನೂಚಾನವಾಗಿ ನಡೆದುಕೊಂಡು ಬಂದಿರುವ ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೋತ್ಸವ ತಾ. ೧೩ ರಿಂದ ತಾ. ೧೭ ರವರೆಗೆ ನಡೆಯಲಿದ್ದು, ತಾ. ೧೬ ರಂದು ೬೫ನೇ ಮಹಾ ರಥೋತ್ಸವ ಅದ್ದೂರಿಯಾಗಿ ನೆರವೇರಲಿದೆ ಎಂದು ಶ್ರೀ ಕುಮಾರಲಿಂಗೇಶ್ವರ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೯೦೦ ವರ್ಷಗಳ ಧಾರ್ಮಿಕ ಇತಿಹಾಸವಿರುವ ಕುಮಾರಲಿಂಗೇಶ್ವರ ದೇವಾಲಯದಲ್ಲಿ ತಾ. ೧೬ ರಂದು ೬೫ನೇ ವರ್ಷದ ಮಹಾ ರಥೋತ್ಸವವು, ಪ್ರಮುಖರ ಸಮ್ಮುಖದಲ್ಲಿ, ಗ್ರಾಮಸ್ಥರು ಹಾಗೂ ಭಕ್ತಾದಿಗಳ ಉಪಸ್ಥಿತಿಯಲ್ಲಿ ಮಧ್ಯಾಹ್ನ ೧೨ ಗಂಟೆಯ ಶುಭಮುಹೂರ್ತದಲ್ಲಿ ನಡೆಯಲಿದೆ ಎಂದರು.
ತಾ. ೧೩ ರಂದು ‘ಬೆಳ್ಳಿ ಬಂಗಾರ ದಿನ’ ಆಚರಣೆಯೊಂದಿಗೆ ಸಂಜೆ ೬.೩೦ರಿಂದ ಜಾತ್ರೆ ಪ್ರಾರಂಭೋತ್ಸವ ಪೂಜೆ ನಡೆಯಲಿದೆ. ತಾ. ೧೪ ರಂದು ‘ಮಕರ ಸಂಕ್ರಮಣ ಕರುವಿನ ಹಬ್ಬ’ ಹಾಗೂ ೭ ಗಂಟೆಗೆ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸಲಾಗುತ್ತದೆ. ಇದರೊಂದಿಗೆ ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ತಾ. ೧೫ ರಂದು ‘ಅರಸು ಬಲ ಸೇವೆ’ ಪೂಜೆ ನಡೆಯಲಿದೆ. ಕೊಡಗು ರಾಜರ ಆಳ್ವಿಕೆ ಕಾಲದಿಂದ ನಡೆದುಕೊಂಡು ಬಂದ ಪದ್ದತಿಯಂತೆ ಕೊತ್ತನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಮಾರಳ್ಳಿ, ಬಾಚಳ್ಳಿ, ಕೂತಿ ನಾಡು, ತೋಳುನಾಡು, ಯಡೂರು, ತಲ್ತರೆಶೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ವಿಶೇಷ ಪರಿಶುದ್ಧತೆಯೊಂದಿಗೆ ವಾದ್ಯಗೋಷ್ಠಿಯ ಮೂಲಕ ದೇವಾಲಯಕ್ಕೆ ಆಗಮಿಸಿ ಅರಸುಬಲ ಸೇವೆ ಸಲ್ಲಿಸಲಿದ್ದಾರೆ.
ಸಂಜೆ ೭.೩೦ ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗುತ್ತವೆ. ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ತಾ. ೧೫ ಹಾಗೂ ೧೬ ರಂದು ಮಹಿಳೆಯರಿಗೆ ಅಂತರ್ ಜಿಲ್ಲಾಮಟ್ಟದ ಥ್ರೋಬಾಲ್, ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ತಾ. ೧೬ ರಂದು ರಥೋತ್ಸವ ಜರುಗಲಿದೆ. ರಥೋತ್ಸವ ಚಾಲನೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಹೆಚ್. ವಿಶ್ವನಾಥ್, ಸುಜಾ ಕುಶಾಲಪ್ಪ, ಶಾಸಕರುಗಳಾದ ಡಾ. ಮಂಥರ್ ಗೌಡ, ಎ.ಎಸ್. ಪೊನ್ನಣ್ಣ, ಮಾಜಿ ಶಾಸಕ ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಮೈಸೂರಿನ ಶುಶ್ರೂತ್ ಗೌಡ, ಅರುಣ್ ಕೊತ್ನಳ್ಳಿ, ಚಂದ್ರಕಲಾ ರಾಮಚಂದ್ರ, ಬಿ.ಬಿ. ಸತೀಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ತಾ. ೧೭ ರಂದು ೩ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿಯ ನಿವೃತ್ತ ಡಿಸಿಎಂ ಕೆ.ಎಂ. ರವೀಂದ್ರ, ಶಾಲಾ ವಾಹನ ಚಾಲಕ ಬಿ.ಬಿ. ನವೀನ್, ಪಿಯುಸಿಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿರುವ ತಲ್ತರೆಶೆಟ್ಟಳ್ಳಿಯ ಕೆ.ಎ. ಅನನ್ಯ ಅವರುಗಳನ್ನು ಸನ್ಮಾನಿಸಲಾಗುವುದು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ಜಾತ್ರೋತ್ಸವ ಅಂಗವಾಗಿ ತಾ. ೧೫ ರಿಂದ ೧೭ ರವರೆಗೆ ಪ್ರತಿದಿನ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಇದರೊಂದಿಗೆ ಫಲಪುಷ್ಪ, ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, ವಿಶೇಷ ವಸ್ತುಗಳಿಗೆ ಬಹುಮಾನ ನೀಡಲಾಗುವುದು ಎಂದು ಲೋಕೇಶ್ ತಿಳಿಸಿದರು.
ಗೋಷ್ಠಿಯಲ್ಲಿ ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಜಿ.ಡಿ. ಬಸವರಾಜು, ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುತ್ತಣ್ಣ, ಖಜಾಂಚಿ ಎಸ್.ಆರ್. ಉತ್ತಯ್ಯ, ದೇವಾಲಯ ಕಾರ್ಯದರ್ಶಿ ಕೆ.ಪಿ. ಚಂಗಪ್ಪ ಅವರುಗಳು ಉಪಸ್ಥಿತರಿದ್ದರು.