ಮಡಿಕೇರಿ, ಜ. ೧೦: sಸರಕಾರದ ಉಚಿತ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಗ್ರಾಹಕರಿಂದ ಲಂಚದ ರೂಪದಲ್ಲಿ ಹಣ ಪಡೆದ ಸೆಸ್ಕ್ ಅಧಿಕಾರಿ ವಿರುದ್ಧ ಇಲಾಖೆ ಕ್ರಮ ಕೈಗೊಂಡಿದ್ದು, ಹಣವನ್ನು ಗ್ರಾಹಕರಿಗೆ ಮರಳಿಸಿದೆ. ಲಂಚ ಪಡೆದ ಹಣವನ್ನು ಮರು ಪಾವತಿ ಮಾಡಿರುವದು ಇದೇ ಪ್ರಥಮ ಪ್ರಕರಣವಾಗಿದ್ದು, ಈ ಅವ್ಯವಹಾರದ ಬಗ್ಗೆ ನಾಲ್ಕು ವರ್ಷಗಳ ಹಿಂದೆ ‘ಶಕ್ತಿ’ ವರದಿ ಮಾಡುವ ಮೂಲಕ ಗಮನ ಸೆಳೆದಿತ್ತು.

ಕಳೆದ ೨೦೨೦-೨೧ನೇ ಸಾಲಿನಲ್ಲಿ ಮೂರ್ನಾಡು ಸೆಸ್ಕ್ ಉಪ ವಿಭಾಗದ ಕಚೇರಿ ಮೇಲ್ವಿಚಾರಕನಾಗಿದ್ದ ಎಂ. ಚೇತನ್‌ಕುಮಾರ್ ಎಂಬವರನ್ನು ಪ್ರಬಾರ ಕಿರಿಯ ಅಭಿಯಂತರರಾಗಿ ನಿಯೋಜನೆ ಮಾಡಲಾಗಿತ್ತು. ಈ ವೇಳೆಯಲ್ಲಿ ಮೂರ್ನಾಡು, ಮರಗೋಡು, ಐಕೊಳ ಗ್ರಾಮಸ್ಥರು ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಐಕೊಳ ಗ್ರಾಮದ ಕೊಂಪುಳಿರ ಕುಟುಂಬಸ್ಥರ ೨೦ ಮನೆಗಳಿಗೆ ವೋಲ್ಟೇಜ್‌ನಲ್ಲಿ ವ್ಯತ್ಯಾಸ ಇದ್ದುದರಿಂದ ಬದಲಿ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಿಕೊಂಡ ಬಳಿಕ ಪರಿವರ್ತಕ ಮಂಜೂರಾಗಿತ್ತು. ಈ ಕಾಮಗಾರಿಯನ್ನು ಯಾವದೇ ಟೆಂಡರ್ ಕರೆಯದೇ ಈ ಅಧಿಕಾರಿ ತಾನೇ ಗುತ್ತಿಗೆ ವಹಿಸಿಕೊಂಡು ನಿರ್ವಹಿಸಿದಲ್ಲದೆ, ಕಾಮಗಾರಿ ನಿರ್ವಹಿಸಲು ರೂ.೪೦ಸಾವಿರ ಹಣದ ಬೇಡಿಕೆ ಇಟ್ಟಿದ್ದರು. ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾ ಯಿಸಿದರೆ ಮಾತ್ರ ಕೆಲಸ ಮಾಡುವದಾಗಿ ಬೆದರಿಕೆ ಕೂಡ ಹಾಕಿದ ಹಿನ್ನೆಲೆಯಲ್ಲಿ ವಿಧಿಯಿಲ್ಲದೆ ಗ್ರಾಹಕರು ರೂ.೪೦ ಸಾವಿರವನ್ನು ಅಧಿಕಾರಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ನಂತರವೂ ಕಾಮಗಾರಿಯನ್ನು ಕೇಂದ್ರ ಸರಕಾರದ ಉಚಿತ ಸೌಭಾಗ್ಯ ಯೋಜನೆಯಡಿ ಕಳಪೆ ಮಟ್ಟದಲ್ಲಿ ನಿರ್ವಹಿಸಿದ್ದು, ಕಾಮಗಾರಿ ಮುಗಿದ ಒಂದು ವಾರದ ಅವಧಿಯಲ್ಲಿ ಕಂಬ ಹಾಗೂ ತಂತಿಗಳು ತುಂಡರಿಸಿ ಬಿದ್ದು ಅನಾಹುತ ಸಂಭವಿಸಿತ್ತು.