ಗೋಣಿಕೊಪ್ಪಲು, ಜ. ೧೦: ಅರಣ್ಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತಲೆ ನೋವಾಗಿ ಕಾಡುತ್ತಿದ್ದ ಹುಲಿಯೊಂದು ಕೊನೆ ಯುಸಿರೆಳೆದ ಘಟನೆ ದ.ಕೊಡಗಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಕಾಫಿ ತೋಟದಲ್ಲಿ ಬೆಳಕಿಗೆ ಬಂದಿದೆ.

ಸಾವನ್ನಪ್ಪಿದ ಹುಲಿಯು ಗಂಡು ಹುಲಿಯಾಗಿದ್ದು, ೧೩ ರಿಂದ ೧೫ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಇತರೆ ಹುಲಿಗಳ ಜಗಳದಿಂದಾಗಿ ಹುಲಿಯು ತನ್ನ ಅರಣ್ಯ ಪ್ರದೇಶವನ್ನು ತೊರೆದು ನಾಡಿನತ್ತ ಮುಖ ಮಾಡಿತ್ತು.

ತನ್ನ ಆಹಾರವನ್ನು ಹುಡುಕುತ್ತಾ ದ.ಕೊಡಗಿನ ಕಾನೂರು, ಬೆಸಗೂರು, ಬಾಳೆಲೆ ನಿಡುಗುಂಬ ಸೇರಿದಂತೆ ಅನೇಕ ಭಾಗದಲ್ಲಿ ಸಂಚರಿಸಿ ರೈತರ ಜಾನುವಾರುಗಳನ್ನು ಬೇಟೆಯಾಡುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾ, ರೈತರ, ಬೆಳೆಗಾರರ ಕಾಫಿ ತೋಟ ದಲ್ಲಿಯೇ ಆಶ್ರಯ ಪಡೆಯುತ್ತಿತ್ತು.

ರೈತರ ಜಾನುವಾರುಗಳ ಮೇಲೆ ಆಗಿಂದಾಗ್ಗೆ ದಾಳಿ ನಡೆಸುತ್ತಿದ್ದ ಹುಲಿಯನ್ನು ಗುರುತಿಸಿದ್ದ ಅರಣ್ಯ ಇಲಾಖೆಯು ಅದನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ, ಆರ್.ಆರ್.ಟಿ. ತಂಡ ಸಾಕಾನೆಗಳ ಸಹಾಯ ಪಡೆದು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಹುಲಿಯ ಸಂಚಾರದ ಬಗ್ಗೆ ಚಲನವಲನಗಳನ್ನು ಗಮನಿಸಲು ಹಲವೆಡೆ

(ಮೊದಲ ಪುಟದಿಂದ) ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಹುಲಿಯ ಹೆಜ್ಜೆ ಗುರುತಾಗಲಿ, ಕ್ಯಾಮೆರಾಗಳಲ್ಲಿ ಹುಲಿಯ ಚಿತ್ರವಾಗಲಿ ಸೆರೆಯಾಗಿರಲಿಲ್ಲ. ಆದರೆ, ಬುಧವಾರ ಮಧ್ಯಾಹ್ನದ ವೇಳೆ ತೋಟದ ಕಾರ್ಮಿಕರು ಕೆಲಸ ನಿಮಿತ್ತ ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಹುಲಿ ಸತ್ತು ಬಿದ್ದಿರುವುದನ್ನು ಕಂಡು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.

ತೋಟದ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹುಲಿಯು ತೋಟದಲ್ಲಿ ಸತ್ತು ಬಿದ್ದಿರುವ ವಿಷಯ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಶಂಕರ್, ದಿವಾಕರ್ ಸೇರಿದಂತೆ ವಿವಿಧ ತಂಡಗಳು, ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.

-ಹೆಚ್.ಕೆ. ಜಗದೀಶ್