ಕೂಡಿಗೆ, ಜ.೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಸರ್ವೆ ನಂಬರ್ ೧ ರ ಪೈಸಾರಿ ಜಾಗದ ಸರ್ವೆಯು ಪೊಲೀಸ್ ಬಂದೋಬಸ್ತ್ ನಡುವೆ ಕಂದಾಯ ಇಲಾಖೆಯ ಮೂಲಕ ನಡೆಯಿತು.
ಮದಲಾಪುರ ಗ್ರಾಮದಲ್ಲಿರುವ ಪೈಸಾರಿ ಜಾಗದಲ್ಲಿ ಈಗಾಗಲೇ ಆರೋಗ್ಯ ಇಲಾಖೆಯ ವತಿಯಿಂದ ೧೨ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಕಟ್ಟಡದಲ್ಲಿ ಖಾಸಗಿಯವರು ವಾಸಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಮತ್ತು ಗ್ರಾಮ ಸಭೆಯಲ್ಲಿ ಚರ್ಚೆಗಳಾಗಿದ್ದವು. ಅಲ್ಲದೆ ಆ ಜಾಗದ ಸರ್ವೆಯನ್ನು ನಡೆಸುವಂತೆ ಮತ್ತು ಸರಕಾರಿ ಕಟ್ಟಡದಲ್ಲಿ ವಾಸಿಸುತ್ತಿರುವ ಖಾಸಗಿ ವ್ಯಕ್ತಿಯನ್ನು ತೆರವುಗೊಳಿಸುವಂತೆ ಗ್ರಾಮ ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳ ನೂರಾರು ಗ್ರಾಮಸ್ಥರು ಒತ್ತಾಯ ಮಾಡಿದ್ದರು. ಕುಶಾಲನಗರ ತಹಶೀಲ್ದಾರ್ ಸೂಚನೆ ಮೇರೆಗೆ ಕಂದಾಯ ಇಲಾಖೆಯಿಂದ ಸರ್ವೆ ನಂಬರ್ ೧ರ ೪.೨೭ ಎಕರೆ ಜಾಗದ ಸರ್ವೆ ಕಾರ್ಯ ನಡೆಯಿತು.
ಈ ಸಂದರ್ಭ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್ , ತಾಲೂಕು ಆರೋಗ್ಯ ಅಧಿಕಾರಿ ಡಾ, ಇಂಧುದರ್, ಸರ್ವೆ ಅಧಿಕಾರಿ ವೆಂಕಟೇಶ್, ಲೆಕ್ಕಾಧಿಕಾರಿ ಗುರುದರ್ಶನ್, ವೆಂಕಟೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್, ಉಪಾಧ್ಯಕ್ಷೆ ಜಯಶ್ರೀ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಪಿ.ಹಮೀದ್, ಜಯಶೀಲಾ, ಲಕ್ಷಿö್ಮ, ರವಿ, ರತ್ನಮ್ಮ ಮಂಗಳಾ, ನಾಲ್ಕು ಗ್ರಾಮದ ಪ್ರಮುಖರಾದ ಚಿದಂಬರ್, ದೇವರಾಜ್, ಐ. ಎಸ್. ಗಣೇಶ್, ಚಾಮಿ, ಧನಪಾಲ್, ಕುಮಾರ್, ಅನಿಲ್, ಧನಂಜಯ, ಮಹಿಳಾ ಸಂಘಟನೆಯ ಪ್ರಮುಖರಾದ ಮಹದೇವಿ, ರಾಗಿಣಿ, ಉಮಾ, ಶಾಂತಿ ಮತ್ತಿತರರು ಹಾಜರಿದ್ದರು.
ಗ್ರಾಮಸ್ಥರ ಪ್ರತಿಭಟನೆ
ಮದಲಾಪುರ ಗ್ರಾಮದಲ್ಲಿರುವ ಪೈಸಾರಿ ಜಾಗದಲ್ಲಿ ಕಳೆದ ೧೦ ವರ್ಷಗಳ ಹಿಂದೆ ಆರೋಗ್ಯ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿರುವ ಸರಕಾರಿ ಕಟ್ಟಡದಲ್ಲಿ ಖಾಸಗಿ ವ್ಯಕ್ತಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತೆರವುಗೊಳಿಸುವಂತೆ ನಾಲ್ಕು ಗ್ರಾಮಗಳ ನೂರಾರು ಗ್ರಾಮಸ್ಥರು ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖೆಯ ವತಿಯಿಂದ ಸರ್ವೆ ನಡೆದ ನಂತರ ಗ್ರಾಮಸ್ಥರು ಗ್ರಾ.ಪಂ. ಸಭೆಯಲ್ಲಿ ಖಾಸಗಿ ವ್ಯಕ್ತಿಯನ್ನು ತೆರವುಗೊಳಿಸುವುದಾಗಿ ಹೇಳಿದ್ದ ಪಿಡಿಓ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಸರಕಾರಿ ಕಟ್ಟಡದಲ್ಲಿರುವ ವ್ಯಕ್ತಿಗಳನ್ನು ತೆರವುಗೊಳಿಸುವಂತೆ ಮತ್ತು ಕಟ್ಟಡಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಬೀಗ ಹಾಕುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಅವರನ್ನು ಒತ್ತಾಯಿಸಿ, ಕಟ್ಟಡದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರು ಒಂದು ಗಂಟೆಗಳ ಕಾಲ ಕಟ್ಟಡದ ಮುಂಭಾಗ ಅಡ್ಡಗಟ್ಟಿ ದಿಕ್ಕಾರ ಕೂಗಿದರು. ನಂತರ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ನಂತರ ನಾಲ್ಕು ಗ್ರಾಮಗಳ ಪ್ರಮುಖರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಮತ್ತು ಸದಸ್ಯರ ಸಮ್ಮುಖದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಸರಕಾರಿ ಕಟ್ಟಡದಲ್ಲಿ ವಾಸಿಸುತ್ತಿರುವ ಖಾಸಗಿ ವ್ಯಕ್ತಿಯನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಅರ್ಜಿ ಪ್ರಕಾರವಾಗಿ ಕಂದಾಯ ಇಲಾಖೆಯ ನಿಯಮಾನುಸಾರ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ, ಅದರ ಸಮರ್ಪಕವಾದ ನಕ್ಷೆ ಗುರುತಿಸುವಿಕೆ ಕಾರ್ಯ ಆದ ತಕ್ಷಣ ನಿಯಮಾನುಸಾರ ಕ್ರಮವನ್ನು ಕೈಗೊಳ್ಳಲು ಒಂದು ವಾರದ ಸಮಯ ಬೇಕಾಗುತ್ತದೆ ಎಂದು ಅರ್ಜಿದಾರರಿಗೆ ತಹಶೀಲ್ದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯ ಹೆಚ್. ಎಸ್. ರವಿ, ಸದಸ್ಯರಾದ ಜಯಶೀಲಾ, ಲಕ್ಷಿö್ಮ, ಪ್ರಮುಖರಾದ ಚಿದಂಬರ್, ಧನಪಾಲ್, ಧನಂಜಯ, ಚಿಮ್ಮಿ, ಕುಮಾರ್ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.