ವೀರಾಜಪೇಟೆ, ಜ. ೧೦: ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಕೊಡವ ಜನಾಂಗದ ಉಳಿವು ಸಾಧ್ಯ ಎಂದು ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.
ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವ ಸಮಾಜದ ಆವರಣದಲ್ಲಿ ನಡೆದ ಪುತ್ತರಿ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ತಾಯಿಯೇ ನಮ್ಮ ಮೊದಲ ಗುರು. ನಾವು ಭೂಮಿ ತಾಯಿಯನ್ನು ಪೂಜೆ ಮಾಡುವವರು. ಭೂಮಿಗೆ ತಾಯಿಯ ಸ್ಥಾನ ನೀಡಿದ್ದೇವೆ ಎಂದರು.
ಕೊಡವರಿಗೆ ಎಸ್ಟಿ ಟ್ಯಾಗ್ ದೊರೆತಲ್ಲಿ ನಮ್ಮ ಸಮುದಾಯ ಮತ್ತಷ್ಟು ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದ ಅವರು, ಬಾಳುಗೋಡು ಸಮಾಜದಲ್ಲಿ ಮುಂದಿನ ಬಾರಿ ಹುತ್ತರಿ ಹಬ್ಬ ಆಚರಣೆ ಮಾಡುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ ಮಾತನಾಡಿ, ಮಹಿಳೆಯರು ದಿನನಿತ್ಯ ಯೋಗ, ಧ್ಯಾನ ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಬೇಕು. ಇದರಿಂದ ಎಷ್ಟೋ ಸಮಸ್ಯೆಗಳು ಪರಿಹಾರ ಆಗುತ್ತವೆ. ಒತ್ತಡ ಕಡಿಮೆ ಆಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನಿಟ್ಟುಕೊಂಡು ಬದುಕನ್ನು ರೂಪಿಸಿಕೊಳ್ಳುವಂತಾಗಬೇಕು ಎಂದರು.
ಚುಮ್ಮಕ್ಕ ಗ್ರೂಪ್ನ ಅಧ್ಯಕ್ಷೆ ಉದ್ದಪಂಡ ವಿಮಲ ಮಾತನಾಡಿ, ಸದಾ ಜಂಜಾಟದ ನಡುವೆ ಇರುವ ಮಹಿಳೆಯರಿಗೆ ಈ ರೀತಿಯ ಕಾರ್ಯಕ್ರಮ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್, ಕೊಡವ ಸಮುದಾಯದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೀಗೆ ಮುಂದುವರೆಯಬಾರದು ಎಂದರು.
ಕೂಟದ ಹಿರಿಯ ಸಲಹೆಗಾರರಾದ ನಾಯಕಂಡ ಬೇಬಿ ಚಿಣ್ಣಪ್ಪ ಕೊಡವ ಸಂಪ್ರದಾಯದAತೆ ತಪ್ಪಡಕ ಕಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿ ಗಣ್ಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವರ ನೆಲೆಯಲ್ಲಿ ಕದಿರು ಕಟ್ಟಿ ಅಕ್ಕಿ ಹಾಕಿ ಪ್ರಾರ್ಥಿಸಿದರು.
ಇದೇ ಸಂದರ್ಭ ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಹಿರಿಯ ತಾಯಂದಿರನ್ನು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಪುಚ್ಚಿಮಂಡ ರಾಧಾ ಕಾರ್ಯಪ್ಪ, ಮುಂಡAಡ ರಾಣು ಮಂದಣ್ಣ, ಪಾಲಚಂಡ ಸೀಮಾ ಸನ್ಮಾನಕ್ಕೆ ಪಾತ್ರರಾದರು. ಮುಖ್ಯ ಅತಿಥಿಗಳಾಗಿದ್ದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಶಾಲಿನಿ ಕಾರ್ಯಪ್ಪ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಅಮ್ಮುಣಿಚಂಡ ಈಶ್ವರಿ ಗಂಗಮ್ಮ, ಸಲಹಾ ಸಮಿತಿ ಸದಸ್ಯರಾದ ಬಿದ್ದಂಡ ರಾಣಿ ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ ಇದ್ದರು. ಚುಮ್ಮಕ್ಕ ಗುಂಪಿನ ಸದಸ್ಯರು ಸ್ವಾಗತ ನೃತ್ಯ, ಕೋಲಾಟ ಹಾಗೂ ಇತರ ನೃತ್ಯ ಪ್ರದರ್ಶನ ನೀಡಿದರು.
ಕೊನೆಯಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಹಾಗೂ ವಾಲಗತ್ತಾಟ್ ಸ್ಪರ್ಧೆ, ಸೀರೆಯ ಬೆಲೆ ಹೇಳುವ ಸ್ಪರ್ಧೆ ನಡೆದು ನಿಖರ ಬೆಲೆ ಹೇಳಿದವರಿಗೆ ಸೀರೆಯನ್ನು ಬಹುಮಾನವಾಗಿ ನೀಡಲಾಯಿತು. ಕೊಡವ ಪೊಮ್ಮಕ್ಕಡ ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿ, ಮಾಳೇಟಿರ ಕವಿತಾ ಶ್ರೀನಿವಾಸ್ ನಿರೂಪಿಸಿ ಖಜಾಂಚಿ ತಾತಂಡ ಯಶು ಕಬೀರ್ ವಂದಿಸಿದರು.