ಕುಶಾಲನಗರ, ಜ. ೯: ಕುಶಾಲನಗರ ಪಟ್ಟಣದ ಹಾಲಿ ಇರುವ ಒಳಚರಂಡಿ ವ್ಯವಸ್ಥೆಯು ಸೋಕ್ ಪಿಟ್ಗಳಿಂದ ಕೂಡಿದ್ದು, ಕಳೆದ ೨೦೧೨ರಲ್ಲಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ರಾಜ್ಯ ಸರ್ಕಾರ ಸುಮಾರು ೪೦ ಕೋಟಿ ರೂಪಾಯಿ ಮೊತ್ತದ ಯೋಜನೆ ಯೊಂದನ್ನು ರೂಪಿಸಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು.
೨೦೧೪ರಲ್ಲಿ ಈ ಯೋಜನೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಅನುಷ್ಠಾನಕ್ಕೆ ತರಲು ಕಾಮಗಾರಿ ಪ್ರಾರಂಭವಾಗಿದ್ದು ದಶಕಗಳು ಕಳೆದರೂ ಈ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ.
ಈ ಯೋಜನೆಗೆ ಗುತ್ತಿಗೆದಾರರನ್ನು ನೇಮಿಸಲಾಗಿದ್ದು ೩೦ ತಿಂಗಳಲ್ಲಿ ಅಂದರೆ ೨೦೧೬ ರ ಆರಂಭದಲ್ಲಿ ಕಾಮಗಾರಿ ಪೂರ್ಣ ಗೊಳಿಸಿ ಅನುಷ್ಠಾನಗೊಳಿಸಲು ಅಂತಿಮ ಗಡುವು ನಿಗದಿ ಪಡಿಸಲಾಗಿತ್ತು.
ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣದ ಗುರಿ ಹೊಂದಿದ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಸಂಪೂರ್ಣ ನೆನೆಗುದಿಗೆ ಬಿದ್ದಿದೆ.
ಕುಶಾಲನಗರ ಪಟ್ಟಣದ ಜನಸಂಖ್ಯೆ ೨೦೨೭ ಹಾಗೂ ೨೦೪೩ ಇಸವಿಯಲ್ಲಿ ಆಗಬಹುದಾದ ಜನಸಂಖ್ಯೆಗೆ ಅನುಗುಣವಾಗಿ ೨೦೧೨ರಲ್ಲಿ ಸರ್ಕಾರದಿಂದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು.
ಈ ಯೋಜನೆಗೆ ಕೊಳವೆಗಳ ಒಳಚರಂಡಿ ಕೊಳವೆ ಮಾರ್ಗ ಹಾಗೂ ಆಳು ಗುಂಡಿಗಳ ನಿರ್ಮಾಣ ಕಾಮಗಾರಿ ಮಾಡಿ ಹತ್ತು ವರ್ಷಗಳೇ ಕಳೆದಿದ್ದು ಕಾಮಗಾರಿ ಬಹುತೇಕ ಕಾವೇರಿ ನದಿ ಪಾಲಾಗಿದೆ.
ಪಟ್ಟಣದ ಶೌಚಾಲಯದ ತ್ಯಾಜ್ಯಗಳು ಸೇರಿದಂತೆ ಇಡೀ ಪಟ್ಟಣದ ಎಲ್ಲಾ ಕಲುಷಿತ ನೀರು ನೇರ ವಾಗಿ ಕಾವೇರಿ ನದಿ ಪಾಲಾಗುತ್ತಿದೆ.
ನದಿ ತಟದಲ್ಲಿ ನಿಯಮ ಬಾಹಿರವಾಗಿ ಮಾಡಿರುವ ಈ ಕಾಮಗಾರಿ ಕಳೆದ ೨೦೧೮ ರಿಂದ ೫ ನಿರಂತರ ವರ್ಷಗಳ ಕಾಲ ಪ್ರವಾಹದಲ್ಲಿ ಮುಳುಗಿ ಹೋಗಿದ್ದು ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ.
ಎರಡನೇ ಹಂತದಲ್ಲಿ ಅಂದಾಜು ರೂ. ೧೮ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ತಾಂತ್ರಿಕತೆಯುಳ್ಳ ಮಲಿನ ನೀರು ಶುದ್ಧೀಕರಣ ಘಟಕ ಕಾಮಗಾರಿ ಕೂಡ ಇನ್ನೂ ಪೂರ್ಣಗೊಂಡಿಲ್ಲ.
ಯೋಜನೆಗೆ ಅಗತ್ಯವಿರುವ ೧೧ ಕೆ.ವಿ. ವಿದ್ಯುತ್ ಮಾರ್ಗ ಕಾರ್ಯ ಕೂಡ ಇನ್ನೂ ಪೂರ್ಣಗೊಂಡಿಲ್ಲ.
ಪಟ್ಟಣದಲ್ಲಿ ಹಾದು ಹೋಗುವ ಹೆದ್ದಾರಿ ರಸ್ತೆಯಲ್ಲಿ ಕೂಡ ಪೈಪ್ ಅಳವಡಿಕೆ ಕಾಮಗಾರಿ ಇನ್ನೂ ನಡೆದಿಲ್ಲ.
ಯೋಜನೆಯ ನಂತರ ಅಧಿಕಾರಿಗಳು ಬದಲಾಗುತ್ತಲೇ ಇದ್ದು, ಕುಶಾಲನಗರದಲ್ಲಿ ಈ ಕಾಮಗಾರಿಯ ಉಸ್ತುವಾರಿ ಹೊತ್ತಿರುವ ಒಳ ಚರಂಡಿ ಮಂಡಳಿ ಅಧಿಕಾರಿ ಮಾತ್ರ ಕಳೆದ ಹತ್ತು ವರ್ಷಗಳಿಂದ ಯೋಜನೆಯ ಬಗ್ಗೆ ಸ್ಥಳೀಯ ನಾಗರಿಕರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದು,
(ಮೊದಲ ಪುಟದಿಂದ) ಈ ದಶ ವಾರ್ಷಿಕ ಯೋಜನೆಯನ್ನು ಪೂರ್ಣಗೊಳಿಸುವ ಹುಸಿ ಭರವಸೆಯಲ್ಲಿ ದಿನದೂಡುತ್ತಿದ್ದಾರೆ.
ಒಳಚರಂಡಿ ಯೋಜನೆಯ ಮೂಲಕ ಪಟ್ಟಣದ ನೈರ್ಮಲ್ಯ ಉತ್ತಮಗೊಳ್ಳಲಿದೆ ಹಾಗೂ ಕಾವೇರಿ ನದಿಯ ಉಗಮ ಸ್ಥಾನದಲ್ಲಿಯೇ ಕಲುಷಿತವಾಗುವುದನ್ನು ತಡೆಗಟ್ಟಬಹುದು. ಇದು ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿತ್ತು.
ಆದರೆ ಈ ಯೋಜನೆ ಪ್ರಾರಂಭವಾದ ನಂತರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಂದ ಅಳವಡಿಸಿರುವ ಪೈಪ್ಗಳ ಮೂಲಕ ನೇರವಾಗಿ ಶೌಚಾಲಯ ತ್ಯಾಜ್ಯಗಳು ನದಿಗೆ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರದ ಶೇ. ೯೫ ಮತ್ತು ಸ್ಥಳೀಯ ಸಂಸ್ಥೆಯ ಶೇ. ೫ ಅನುದಾನದಲ್ಲಿ ಈ ಯೋಜನೆ ರೂಪಗೊಂಡಿದ್ದು ಇದೀಗ ಸರ್ಕಾರದಿಂದ ಸುಮಾರು ೫೮ ಕೋಟಿ ರೂಪಾಯಿಗಳು ಬಿಡುಗಡೆಯಾಗಿವೆ. ಆದರೆ ಕಾಮಗಾರಿ ಇನ್ನೂ ಶೇ. ೬೦ ರಷ್ಟು ಪೂರ್ಣಗೊಂಡಿಲ್ಲ.
ಅಪೂರ್ಣಗೊAಡಿರುವ ಕಾಮಗಾರಿಯ ಬಗ್ಗೆ ‘ಶಕ್ತಿ’ಯಲ್ಲಿ ಹಲವು ಬಾರಿ ವರದಿಯಾಗಿದ್ದು ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಹುಸಿ ಭರವಸೆ ನೀಡಿದ ಮಂಡಳಿಯ ಅಧಿಕಾರಿಗಳು ೨೦೨೨ರ ಮೇ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕುಶಾಲನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಡುವುದು ಖಚಿತ ಎಂದು ಅನುಪಾಲನ ವರದಿ ಸಲ್ಲಿಸಿದ್ದರು.
ಆದರೆ ಇದೀಗ ೨೦೨೪ ಆರಂಭಗೊAಡಿದೆ. ಒಳಚರಂಡಿ ಕಾಮಗಾರಿ ಮಾತ್ರ ಇನ್ನು ಅನುಷ್ಠಾನಗೊಂಡಿಲ್ಲ. ಇದರಿಂದ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಸಂಪೂರ್ಣ ಕಲುಷಿತ ನೀರು ನೇರವಾಗಿ ಕಾವೇರಿ ನದಿಗೆ ಹರಿಯುತ್ತಿದ್ದು ಇಡೀ ಕಾವೇರಿ ಬಹುತೇಕ ಕಲುಷಿತಗೊಳ್ಳುವ ಜೊತೆಗೆ ತನ್ನ ಮೂಲ ಗುಣಮಟ್ಟವನ್ನು ಕಳೆದುಕೊಂಡು ಹರಿಯುವ ಸ್ಥಿತಿ ಬಂದೊದಗಿದೆ.
ಕುಶಾಲನಗರದ ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಗುಮ್ಮನಕೊಲ್ಲಿ ತನಕ ಸುಮಾರು ೪.೫ ಕಿಲೋಮೀಟರ್ ಉದ್ದಕ್ಕೆ ಕಾವೇರಿ ನದಿಯ ಅಂಚಿನಲ್ಲಿ ಪೈಪ್ಗಳನ್ನು ಅಳವಡಿಸಲಾಗಿದ್ದು ಪ್ರವಾಹದ ಹಿನ್ನೆಲೆಯಲ್ಲಿ ಕಾಮಗಾರಿ ಪರಿಕರಗಳು ಸಂಪೂರ್ಣ ನದಿ ಪಾಲಾದ ದೃಶ್ಯ ಕಾಣಬಹುದು.
ಯೋಜನೆಯನ್ನು ಪರಿಶೀಲನೆ ಮಾಡುವ ಹೆಸರಿನಲ್ಲಿ ಆಗಾಗ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಹೊರತು ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ರೂ. ೪೦ ಕೋಟಿಯ ಕಾಮಗಾರಿ ಇದೀಗ ೫೮ ಕೋಟಿಗೆ ಏರಿದೆ. ಮುಂದೆ ಯೋಜನೆ ಪೂರ್ಣಗೊಳ್ಳಬೇಕಾದಲ್ಲಿ ಇನ್ನೂ ಹಲವಾರು ಕೋಟಿ ಅನುದಾನದ ಅಗತ್ಯತೆ ಕಂಡುಬರಬಹುದು.
ಇನ್ನಾದರೂ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಶಾಲನಗರದ ಬೃಹತ್ ಯೋಜನೆ ಒಂದನ್ನು ಪೂರ್ಣಗೊಳಿಸಿ ಅನುಷ್ಠಾನ ಗೊಳಿಸುವುದರೊಂದಿಗೆ ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣ ಮಾಡುವಲ್ಲಿ ಕೂಡಲೇ ಕಾರ್ಯ ತತ್ವರಾಗಬೇಕಾಗಿದೆ.
ವರದಿ - ಎಂ.ಎನ್. ಚಂದ್ರಮೋಹನ್