ಮಡಿಕೇರಿ, ಜ. ೮: ಸಮಾಜದಲ್ಲಿ ದುಷ್ಕೃತ್ಯಗಳನ್ನು ತಡೆಯಲು

ಪೊಲೀಸ್ ಭಯದ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಕಾನೂನಿನ ಮೇಲೆ ಭಯ ಮೂಡುವಂತೆ ಮಾಡುವುದು ಅತ್ಯವಶ್ಯಕ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಕಾನೂನಿನ ಬಗ್ಗೆ ಗೌರವ ಮತ್ತು ಭಯ ಮೂಡುವುದಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಮತ್ತು ಆಯಾ ಪ್ರಕರಣದಲ್ಲಿ ಆಗಿರುವ ಶಿಕ್ಷೆಯ ಪ್ರಮಾಣ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ದಾಖಲಿಸಿದ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ನುಡಿದರು.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆಗೆ ಕಡಿವಾಣ ಹಾಕಲಾಗುತ್ತಿದೆ. ಇದರೊಂದಿಗೆ ಕೊಡಗಿನಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಯನ್ನು ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಪರಿಹರಿಸಲು ಆದ್ಯತೆ ನೀಡಲಾಗುವುದು ಕೆ. ರಾಮರಾಜನ್ ಹೇಳಿದರು.

(ಮೊದಲ ಪುಟದಿಂದ) ಪೊಲೀಸ್ ಇಲಾಖೆ ಮಾದಕ ವಸ್ತುಗಳ ಅಕ್ರಮ ಮಾರಾಟ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಪ್ರಕರಣಗಳನ್ನು ದಾಖಲಿಸುತ್ತಿದೆ. ಆದರೆ, ಕಾನೂನಿನ ಅನ್ವಯ ಪ್ರಕರಣದ ಆರೋಪಿಗಳು ತಕ್ಷಣವೇ ಹೊರಬರುವ ಪ್ರಸಂಗಗಳು ನಡೆಯುತ್ತಿವೆಯಾದರೂ, ಪೊಲೀಸ್ ಇಲಾಖೆ ಮಾದಕ ವಸ್ತುಗಳ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಪ್ರವಾಸಿ ಋತುಗಳು ಮತ್ತು ಉತ್ಸವಗಳ ಸಂದರ್ಭ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ವಾಹನ ದಟ್ಟಣೆ, ನಿಲುಗಡೆ ಸಮಸ್ಯೆಗಳನ್ನು ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಕೊಳ್ಳಲು ಪೊಲೀಸ್ ಇಲಾಖೆ ಸದಾ ಸಿದ್ಧವಿದೆ ಎಂದರು. ಪ್ರವಾಸಿತಾಣ ರಾಜಾಸೀಟ್‌ನಲ್ಲಿ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆಗಳಿಲ್ಲ. ಇದನ್ನು ಪರಿಹರಿಸುವ ಪರ್ಯಾಯ ಮಾರ್ಗ ಗಳತ್ತ ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸುವ ಭರವಸೆ ನೀಡಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಇತರೆ ಜಿಲ್ಲೆಗಳಲ್ಲಿ ಕಂಡು ಬರುವ ರಾಜಕೀಯ ಕಾರಣಗಳಿಂದ ಮತ್ತು ಉದ್ದೇಶ ಪೂರ್ವಕವಾಗಿ ಷಡ್ಯಂತ್ರ ನಡೆಸಿ ನಡೆಸುವ ಹತ್ಯಾ ಪ್ರಕರಣಗಳು ನಡೆಯುತ್ತಿಲ್ಲ. ಇದಕ್ಕೆ ಬದಲಾಗಿ ಕುಟುಂಬಸ್ಥರ ನಡುವಿನ ಕಲಹಗಳಿಂದ ಅದರಲ್ಲೂ ಮದ್ಯಸೇವನೆಯಿಂದ ನಡೆಯುವ ಹತ್ಯಾ ಪ್ರಕರಣಗಳೆ ಅಧಿಕ. ಈ ಹಿನ್ನೆಲೆ ಅನಧಿಕೃತ ಮದ್ಯ ಮಾರಾಟ ಪ್ರಕರಣಗಳ ಮೇಲೆ ಕ್ರಮ ಜರುಗಿಸಲು ಅಬಕಾರಿ ಇಲಾಖೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಒತ್ತಡ ಹಾಕುವುದಾಗಿ ರಾಮರಾಜನ್ ತಿಳಿಸಿದರು.

ಕೊಡಗಿನಲ್ಲಿ ಕಾಫಿ ಕೊಯ್ಲಿನ ಹಂತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಆದರೆ, ಇವರೆಲ್ಲರನ್ನು ಪರಿಶೀಲಿಸಲು ಪೊಲೀಸರಿಗೆ ಅಸಾಧ್ಯ. ಈ ಹಿನ್ನೆಲೆ ತಮ್ಮ ತೋಟಗಳಲ್ಲಿ ಕೆಲಸ ನಿರ್ವಹಿಸಲು ಬರುವ ಕಾರ್ಮಿಕರ ಆಧಾರ್, ಪ್ಯಾನ್ ಕಾರ್ಡ್ಗಳ ಮಾಹಿತಿಯನ್ನು, ಭಾವಚಿತ್ರವನ್ನು ಪಡೆದುಕೊಳ್ಳುವ ಜವಾಬ್ದಾರಿ ಬೆಳೆಗಾರರದ್ದಾಗಿರುತ್ತದೆ. ಯಾವುದೇ ಕಾರ್ಮಿಕರ ಬಗ್ಗೆ ಸಂಶಯಗಳು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತಾಗಬೇಕೆAದರು

ಜಿಲ್ಲೆಯಲ್ಲಿ ನಕಲಿ ದಾಖಲೆ ಗಳೊಂದಿಗೆ ಬಾಂಗ್ಲಾ ವಲಸಿಗ ಕಾರ್ಮಿಕರು ಆಗಮಿಸುತ್ತಾರೆ ಎನ್ನುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ, ಇಂತಹ ಯಾವುದೇ ಪ್ರಕರಣಗಳ ಬಗ್ಗೆ ಸಂಶಯಗಳಿದ್ದಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡುವುದರೊಂದಿಗೆ, ಬೆಳೆಗಾರರು ಜಾಗೃತರಾಗಬೇಕೆಂದರು.

ಜಿಲ್ಲಾ ವ್ಯಾಪ್ತಿಯಲ್ಲಿರುವ ಅಕ್ರಮ ಹೋಂಸ್ಟೇಗಳು ಮತ್ತು ಅವುಗಳಲ್ಲಿ ವಾಸ್ತವ್ಯಕ್ಕೆ ಬಂದ ಪ್ರವಾಸಿಗರಿಂದ ಸಾರ್ವಜನಿಕರಿಗೆ ಉಂಟಾಗುವ ಸಂಕಷ್ಟಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ರಮ ಹೋಂಸ್ಟೇಗಳಿAದ ಸಾರ್ವಜನಿಕರಿಗೆ ತೊಂದರೆಯಾದಾಗ ದೂರವಾಣಿ ‘೧೧೨’ ಕ್ಕೆ ಕರೆ ಮಾಡಿದಲ್ಲಿ, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೊಡಗು ಜಿಲ್ಲೆಯ ಜನ ವಿದ್ಯಾವಂತರಾಗಿದ್ದು, ಯಾವುದೇ ಪ್ರಕರಣಗಳು ಪೊಲೀಸ್‌ಠಾಣೆ ಮೆಟ್ಟಿಲೇರಿದಾಗ, ಅದರ ಬಗೆ ಹರಿಕೆಗೆ ಮಾರ್ಗೋಪಾಯಗಳನ್ನು ಸೂಚಿಸಿದರೆ ಅದನ್ನು ಅರಿತು ಕೊಳ್ಳುತ್ತಾರೆ. ಆದ್ದರಿಂದ ಜಿಲ್ಲೆಯಲ್ಲಿ ಲಾಠಿ ಪ್ರಯೋಗದ ಅವಶ್ಯಕತೆ ಇಲ್ಲ. ಆದರೆ ಕೆಲ ಜಿಲ್ಲೆಗಳಲ್ಲಿ ಅಂತಹ ಪರಿಸ್ಥಿತಿಗಳಿಲ್ಲ. ಅಲ್ಲಿ ಲಾಠಿ ಇದ್ದಾಗಲೆ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನುಡಿದರು.

ಇದೇ ಸಂದರ್ಭ ಕೊಡಗು ಪತ್ರಕರ್ತರ ಸಂಘದಿAದ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ವಹಿಸಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಸಲಹೆಗಾರರಾದ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ವಂದಿಸಿದರು.