ಮಡಿಕೇರಿ, ಜ. ೮: ತನ್ನ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಮೇಲೆ ಹಲ್ಲೆ ಗೈದು ಚಿನ್ನದ ಸರವನ್ನು ದರೋಡೆ ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಮಿಂಚಿನ ಕಾರ್ಯಾಚರಣೆ ಮೂಲಕ ೨ ಗಂಟೆಯೊಳಗೆ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ರಾಜರಾಜೇಶ್ವರಿ ನಗರದ ನಿವಾಸಿ ಅಬ್ದುಲ್ ರಜಾಕ್ (೩೫) ಬಂಧಿತ ವ್ಯಕ್ತಿ.

ಘಟನೆ ಹಿನ್ನೆಲೆ

ನಗರದ ದೇಚೂರು ನಿವಾಸಿಯಾದ ಶಿವಕುಮಾರ್ ಅವರು ತಾ. ೭ ರಂದು ರಾತ್ರಿ ೯ ಗಂಟೆ ಸುಮಾರಿಗೆ ಜನರಲ್ ತಿಮ್ಮಯ್ಯ

ದರೋಡೆ ಪ್ರಕರಣ ಆರೋಪಿ ಬಂಧನ

(ಮೊದಲ ಪುಟದಿಂದ) ವೃತ್ತದಿಂದ ಆಟೋ ರಿಕ್ಷಾದಲ್ಲಿ ಕಾಲೇಜು ರಸ್ತೆಗೆ ತೆರಳಿ ನಂತರ ಮನೆಗೆ ಹೋಗುವ ಸಂದರ್ಭ ಆಟೋ ಚಾಲಕ ಅಬ್ದುಲ್ ರಜಾಕ್ ಅಪ್ಪಚ್ಚ ಕವಿ ರಸ್ತೆ ಬಳಿ ಕರೆದೊಯ್ದು ಏಕಾಏಕಿ ಶಿವಕುಮಾರ್ ಮೇಲೆ ಹಲ್ಲೆ ಮಾಡಿ ಬಲತ್ಕಾರವಾಗಿ ಕತ್ತಿನಲ್ಲಿದ್ದ ೧೫ ಗ್ರಾಂ ಚಿನ್ನದ ಸರವನ್ನು ಕಸಿದು ಅಲ್ಲಿಂದ ಪರಾರಿಯಾಗಿದ್ದ. ನಂತರ ಶಿವಕುಮಾರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ೨ ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಉಪನಿರೀಕ್ಷಕರುಗಳಾದ ಲೋಕೇಶ್, ರಾಧಾ ಹಾಗೂ ಸಿಬ್ಬಂದಿಗಳ ನೇತೃತ್ವದ ತನಿಖಾ ತಂಡ ರಚಿಸಿದ್ದರು.