ಗೋಣಿಕೊಪ್ಪಲು, ಜ. ೮: ಜಿಲ್ಲೆಗೆ ೫ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ರಾಜ್ಯದ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದರು.
ಪೊನ್ನಂಪೇಟೆಯಲ್ಲಿ ಅಹವಾಲು ಸ್ವೀಕರ ಸಭೆ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಾರು ವರ್ಷ ಹಳೆಯ ಶಾಲಾ ಕಟ್ಟಡಗಳಿದ್ದು, ಅವುಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಜೊತೆಗೆ ನುರಿತ ಶಿಕ್ಷಕರನ್ನು ನೇಮಿಸಿ ಪಬ್ಲಿಕ್ ಶಾಲೆಯಾಗಿ ಉನ್ನತೀಕರಿಸ ಲಾಗುವುದು. ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಮುಂದಾಗಿದ್ದೇವೆ. ಮಲೆನಾಡು ಭಾಗಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದರು.
(ಮೊದಲ ಪುಟದಿಂದ)
ಸಭೆ ನಡೆಸಿದ ಸಚಿವರು : ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ವಿವಿಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷರುಗಳು, ಶಿಕ್ಷಕರು, ಅನುದಾನಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು. ಖಾಸಗಿ ಶಾಲೆಗಳು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಿವೆೆ. ಈ ನಿಟ್ಟಿನಲ್ಲಿ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳನ್ನು ಪ್ರತ್ಯೇಕವಾಗಿ ನೇಮಿಸಬೇಕು. ಪ್ರತಿ ವರ್ಷವು ಶಾಲಾ ಮಾನ್ಯತೆ ನವೀಕರಣವನ್ನು ಕನಿಷ್ಟ ೫ ವರ್ಷPಗಳ ಅವಧಿಗೆ ವಿಸ್ತರಿಸಬೇಕು. ಮಾನ್ಯತೆಗೆ ಪ್ರತಿ ತರಗತಿಯಲ್ಲಿ ಇಂತಿಷ್ಟು ವಿದ್ಯಾರ್ಥಿಗಳು ಇರಬೇಕೆಂಬ ನಿಬಂಧನೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಅತೀ ಹೆಚ್ಚಿನ ನಿಬಂಧನೆಯನ್ನು ಸಡಿಲಗೊಳಿಸಬೇಕು. ಸೇರಿದಂತೆ ಹಲವು ಸಮಸ್ಯೆಗಳನ್ನು ಸಚಿವರ ಮುಂದೆ ಕೊಡಗು ಯುನೈಟೆಡ್ ಸ್ಕೂಲ್ಸ್ ಮ್ಯಾಜೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಕೊಳೇರ ಝರುಗಣಪತಿ ಹಾಗೂ ಕಾರ್ಯದರ್ಶಿಗಳಾದ ಕೊಟ್ರಂಗಡ ತಿಮ್ಮಯ್ಯ, ಮಾದಂಡ ಪೂವಯ್ಯ, ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದೇವೆ. ಶೇ.೪ರಷ್ಟು ಮಂದಿಗೆ ಈ ಯೋಜನೆಯು ತಾಂತ್ರಿಕ ಕಾರಣದಿಂದ ಲಭ್ಯವಾಗುತ್ತಿಲ್ಲ. ಇದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದನ್ನು ಗಮನಿಸಿದ್ದೇನೆ. ಇವುಗಳನ್ನು ಹಂತಹAತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ದುರಸ್ತಿ, ಶಿಕ್ಷಕರ ನೇಮಕಾತಿ ಪ್ರಗತಿಯಲ್ಲಿದೆ. ಪ್ರಮುಖವಾಗಿ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿಯೂ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಲಿದ್ದಾರೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ಸಕಾಲದಲ್ಲಿ ನೇಮಕಗೊಳಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಎದುರಾಗದಂತೆ ಕ್ರಮ ವಹಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಹತ್ತನೆ ತರಗತಿಯವರೆಗೂ ಎರಡು ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಮಕ್ಕಳ ಪುಸ್ತಕದ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ. ಪಠ್ಯ ಪುಸ್ತಕಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು ಅಗತ್ಯಕ್ಕೆ ತಕ್ಕಂತೆ ನೋಟ್ಬುಕ್ ಹಾಗೂ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳು ಶಾಲೆಗೆ ತರುವುದರಿಂದ ಪುಸ್ತಕದ ಭಾರದ ಹೊರೆಯನ್ನು ಇಳಿಸುವ ಕೆಲಸ ಪ್ರಗತಿಯಲ್ಲಿದೆ. ಕೆಪಿಎಸ್ ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗುವುದು. ಶಾಲೆಗಳ ದುರಸ್ತಿಗೆ ಹಣ ಮಂಜೂರಾತಿ ಮಾಡಲಾಗುವುದು ಮುಂದಿನ ಎರಡು ವರ್ಷದಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕಟ್ಟಡಗಳನ್ನು ದುರಸ್ತಿ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವರ ಭೇಟಿಯ ವೇಳೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೊಳೇರ ಭಾರತಿ, ಪಕ್ಷದ ಪ್ರಮುಖರಾದ ಪಿ.ಕೆ.ಪೊನ್ನಪ್ಪ, ಮೂಕಳೇರ ಕುಶಾಲಪ್ಪ, ಆದೇಂಗಡ ತಾರಾ ಅಯ್ಯಮ್ಮ, ಆಪಟ್ಟಿರ ಟಾಟುಮೊಣ್ಣಪ್ಪ, ಬಾನಂಡ ಪೃಥ್ಯು, ವಿ.ಟಿ.ವಾಸು, ಧನಲಕ್ಷಿö್ಮ, ಮಲ್ಲಂಡ ಪ್ರಕಾಶ್, ಶಾಜಿ ಅಚ್ಚುತ್ತನ್, ಮತ್ರಂಡ ದಿಲ್ಲು, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. - ಹೆಚ್.ಕೆ.ಜಗದೀಶ್