ಚಿಕ್ಕತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ: ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಭೇಟಿ

ಕುಶಾಲನಗರ, ಜ. ೮: ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ. ಅವರು ಚಿಕ್ಕತ್ತೂರು ಗ್ರಾಮದ ಆನೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಹಾನಿ ಮತ್ತು ಆನೆ ಕಂದಕ ಸ್ಥಳ ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅತ್ತೂರು ಅರಣ್ಯ ವಲಯದ ಅಂಚಿನಲ್ಲಿರುವ ಚಿಕ್ಕತ್ತೂರು ಗ್ರಾಮದ ಕೃಷಿ ಪ್ರದೇಶಗಳಿಗೆ ಕಾಡಾನೆಗಳು ಹಾವಳಿ ಮಾಡುತ್ತಿದ್ದು, ಈ ಬಗ್ಗೆ ಸ್ಥಳೀಯ ರೈತರು ದೂರು ನೀಡಿದ್ದರು. ಅರಣ್ಯ ಅಂಚಿನ ಗ್ರಾಮದಲ್ಲಿ ಕೈಗೊಂಡಿರುವ ಆನೆ ಕಂದಕಗಳು ಬಹುತೇಕ ಮುಚ್ಚಿ ಹೋಗಿದ್ದು ಸದ್ಯದಲ್ಲಿ ಅದನ್ನು ಸರಿಪಡಿಸಲಾಗುವುದು ಹಾಗೂ ಕೆಲವೆಡೆ ಬಂಡೆಗಳನ್ನು ಒಡೆಯುವ ಕಾರ್ಯ ನಡೆಯಲಿದೆ. ಈ ಸಂದರ್ಭ ಸ್ಥಳೀಯ ರೈತರು ಸಹಕರಿಸಬೇಕೆಂದು ಕೋರಿದರು.

ಶಾಶ್ವತವಾಗಿ ಆನೆ ದಾಳಿ ತಪ್ಪಿಸಲು ಸೋಲಾರ್ ಫೆನ್ಸಿಂಗ್ ಅಥವಾ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ರೈತರ ಸಮಸ್ಯೆಗೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಮತ್ತು ಪಂಚಾಯಿತಿ ಸದಸ್ಯರಾದ ದಿನೇಶ್, ಖತೀಜ ಅವರುಗಳು ಕಾಡಾನೆಯಿಂದ ಕೃಷಿಕರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕೆಲವು ದಿನಗಳ ಹಿಂದೆ ಕಾಡಾನೆಗಳು ಪ್ರತ್ಯಕ್ಷಗೊಂಡ ಸಂದರ್ಭ ಸ್ಥಳೀಯರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆಯೂ ಮಾಹಿತಿ ನೀಡಿದರು.

ಈ ಸಂದರ್ಭ ಅತ್ತೂರು ಅರಣ್ಯ ವಿಭಾಗದ ಉಪ ಅರಣ್ಯ ವಲಯ ಅಧಿಕಾರಿ ಅನಿಲ್ ಡಿಸೋಜಾ, ಮಂಜೇಗೌಡ ಮತ್ತು ಸ್ಥಳೀಯರಾದ ವಿ.ಜೆ. ನವೀನ್, ಉದಯ ನೌಶಾದ್, ಪುರುಷೋತ್ತಮ್, ಸುನಿಲ್, ವಿನಯ್ ಮತ್ತು ಗ್ರಾಮಸ್ಥರು ಇದ್ದರು.