ಮಡಿಕೇರಿ, ಜ. ೮: ರಾಜಾಸೀಟ್ ಆವರಣದ ಬೀದಿಬದಿಯಲ್ಲಿದ್ದ ೮ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಇದಕ್ಕೆ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.
ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ ಆವರಣದಲ್ಲಿರುವ ಬೀದಿಬದಿ ಅಂಗಡಿಗಳಿAದ ಅಶುಚಿತ್ವ ವಾಹನ ಸಂಚಾರ, ನಿಲುಗಡೆ, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಯಿತು.
ಕೆಲ ತಿಂಗಳ ಹಿಂದೆ ರಾಜಾಸೀಟ್ ಒಳಭಾಗದಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸಲಾಗುತಿತ್ತು. ಈ ವೇಳೆ ವರ್ತಕ ಹಾಗೂ ಸೆಕ್ಯೂರಿಟಿ ನಡುವೆ ನಡೆದ ಘರ್ಷಣೆಯಿಂದ ಎಲ್ಲಾ ವರ್ತಕರನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಕೆಲ ಸಮಯ ಕೂರ್ಗ್ ವಿಲೇಜ್ ಎದುರು ಅಂಗಡಿ ಹಾಕಿಕೊಂಡಿದ್ದ ವ್ಯಾಪಾರಿಗಳು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರ ಭರವಸೆ ಹಿನ್ನೆಲೆ ದಸರಾ ಸಮಯದಲ್ಲಿ ರಾಜಾಸೀಟ್ ಆವರಣದಲ್ಲಿ ಮತ್ತೆ ಅಂಗಡಿ ಹಾಕಿಕೊಂಡರು. ಬಳಿಕ ನಗರಸಭೆ ಅಧಿಕಾರಿಗಳು ಅಂಗಡಿ ತೆರವಿಗೆ ಮುಂದಾದ ಸಂದರ್ಭ ತೆರವಿಗೆ ವ್ಯಾಪಾರಿಗಳು ನಿರಾಕರಿಸಿದ್ದರು.
ಇಂದು ನಗರಸಭೆ ಪರಿಸರ ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರೆ ಸೌಮ್ಯ, ಸಮುದಾಯ ಸಂಘಟನಾಧಿಕಾರಿ ಶೈಲಾ, ಆರೋಗ್ಯ ನಿರೀಕ್ಷಕಿ ನಿಶಾ ಸ್ಥಳಕ್ಕಾಗಮಿಸಿ ಅಂಗಡಿಯನ್ನು ತೆರವುಗೊಳಿಸಿ ನಗರಸಭೆ ಗುರುತಿಸಿರುವ ನಗರ ಠಾಣೆ ಸಮೀಪ ಅಥವಾ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಅಂಗಡಿ ಹಾಕಿಕೊಳ್ಳುವಂತೆ ಮನವೊಲಿಸುವ ಪ್ರಯತ್ನ ಮಾಡಿದರು.
ಇದಕ್ಕೆ ಒಪ್ಪದ ವ್ಯಾಪಾರಿಗಳು ಕೂರ್ಗ್ ವಿಲೇಜ್ ಎದುರು ಅಂಗಡಿ ಹಾಕಿಕೊಳ್ಳಲು ಮುಂದಾದರು. ಅಧಿಕಾರಿಗಳು ಇಲ್ಲಿಯೂ ವ್ಯಾಪಾರ ಮಾಡಬೇಡಿ ಎಂದು ಸೂಚಿಸಿದ ಸಂದರ್ಭ ಸಾಲ ಮಾಡಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ತೆರವುಗೊಳಿಸಿದರೆ ಎಲ್ಲಿಗೆ ಹೋಗುವುದು?, ನಮ್ಮ ಬದುಕು ಮುಂದೆ ಹೇಗೆ? ಎಂದು ಪ್ರಶ್ನಿಸಿದರು.
ನಂತರ ಸ್ಥಳಕ್ಕಾಗಮಿಸಿದ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸಂಚಾರ ವಿಷಯದಲ್ಲಿ ವ್ಯಾಪಕ ವಿರೋಧವಿದೆ. ಪರ್ಯಾಯ ಸ್ಥಳಕ್ಕೆ ಹೋಗುವಂತೆ ತಿಳಿಸಿದರು. ಸ್ಥಳಾಂತರಗೊಳ್ಳದಿದ್ದಲ್ಲಿ ಒತ್ತಾಯಪೂರ್ವಕವಾಗಿ ಸ್ಥಳಾಂತರಿಸುವAತೆ ಅಧಿಕಾರಿಗಳಿಗೆ ಸೂಚಿಸಿ ತೆರಳಿದ ನಂತರ ವ್ಯಾಪಾರಿ ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಗಿ ಸ್ಥಳಾಂತರಕ್ಕೆ ವಿರೋಧಿಸಿದರು.
ಪೌರಾಯುಕ್ತರ ಆಗಮನ
೪ ಕಡೆ ಜಾಗ ಗುರುತಿಸಿ, ಸಭೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೂ ಸ್ಥಳಾಂತರಗೊಳ್ಳದಿರುವುದಕ್ಕೆ ಪೌರಾಯುಕ್ತ ವಿಜಯ ಸ್ಥಳಕ್ಕೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು.
ನಿಮ್ಮ ವ್ಯಾಪಾರಕ್ಕೆ ಸಮಸ್ಯೆ ಮಾಡುವುದು ನಮ್ಮ ಉದ್ದೇಶವಲ್ಲ. ಅವಘಡ ಸಂಭವಿಸುವ ಮುನ್ನ ಎಚ್ಚರವಹಿಸುವುದು ನಮ್ಮ ಕರ್ತವ್ಯ. ನೀವು ಜಾಗ ಗುರುತಿಸಿ ಮನವಿ ಸಲ್ಲಿಸಿ ಅದರನ್ವಯ ಪೊಲೀಸ್, ಜಿಲ್ಲಾಡಳಿತ, ನಗರಸಭೆ ಆಡಳಿತಮಂಡಳಿಯೊAದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ವ್ಯಾಪಾರಕ್ಕೆ ಇಲ್ಲಿ ಅವಕಾಶವಿಲ್ಲ. ೨೪ ಗಂಟೆಯೊಳಗೆ ಅಂಗಡಿ ತೆರವುಗೊಳಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು. ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಅನುಮತಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿ ಅಂಗಡಿ ಮುಚ್ಚಿ ತೆರಳಿದರು.