ಕುಶಾಲನಗರ, ಜ. ೮: ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಾಗಿರುವುದು ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ ಅವರು ಕರೆ ನೀಡಿದರು.
ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೊರ್ಮೆಯ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಪತ್ರಕರ್ತ ಅಜ್ಜನಿಕಂಡ ಪಿ. ಮಹೇಶ್ ನಾಚಯ್ಯ ಮಾತನಾಡಿ, ಕೊಡವರು ಯಾವುದೇ ಸಂದರ್ಭ ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಬಾರದು. ಹಿರಿಯರು ಬಳುವಳಿ ನೀಡಿದ ಆಸ್ತಿಯಲ್ಲಿ ದುಡಿದು ನೆಮ್ಮದಿಯನ್ನು ಕಾಣಬೇಕು. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಜನಾಂಗದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಮಾತನಾಡಿ, ಸಮಾಜಕ್ಕೆ ದುಡಿದ ಹಿರಿಯರನ್ನು ನೆನಪಿಸಿ, ಪುತ್ತರಿ ವಿಶೇಷತೆ ಬಗ್ಗೆ ತಿಳಿಸಿದರು. ಯುವ ಜನಾಂಗಕ್ಕೆ ಸಮೃದ್ಧಿ, ನಿಯಮ, ನೀತಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಉನ್ನತ ಶಿಕ್ಷಣ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಮಕ್ಕಳಿಂದ ನೃತ್ಯ, ಭರತನಾಟ್ಯ, ಉಮ್ಮತಾಟ್ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ವಾಂಚೀರ ಮನು ನಂಜುAಡ, ಖಜಾಂಚಿ ಬಲ್ಯಾಟಂಡ ಚಂಗಪ್ಪ ಇದ್ದರು. ಕೊಕ್ಕಲೆರ ಧರಣಿ ಕಾರ್ಯಕ್ರಮ ನಿರೂಪಣೆ ಮಾಡಿದರು.