ಮಡಿಕೇರಿ, ಜ. ೭: ನಗರದ ಸುದರ್ಶನ ಗೌಡ ಕೂಟದ ೧೫ನೇ ವಾರ್ಷಿಕ ಮಹಾಸಭೆ ಮತ್ತು ಸಾಂಸ್ಕೃತಿಕ, ಸಂತೋಷಕೂಟ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಬಾರಿಯಂಡ ಜೋಯಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಬೆಳೆಸುವಂತಾಗಬೇಕು. ಐನ್‌ಮನೆಗಳಿದ್ದರೆ ಮಾತ್ರ ಸಂಸ್ಕೃತಿ ಸಂಪ್ರದಾಯ ಉಳಿಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು. ಅಗಲಿದ ಸದಸ್ಯರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದರ್ಶನ ಗೌಡ ಕೂಟದ ಅಧ್ಯಕ್ಷ ಮೇರ್ಕಜೆ ಎಂ. ಬೋಪಯ್ಯ ವಹಿಸಿದ್ದರು.

ವೇದಿಕೆಯಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಗೌಡ ಕೂಟದ ಗೌರವಾಧ್ಯಕ್ಷ ತಳೂರು ಆನಂದ, ಉಪಾಧ್ಯಕ್ಷೆ ಕಟ್ಟೆಮನೆ ಅನುಸೂಯ ಪ್ರಭಾಕರ್, ಕಾರ್ಯದರ್ಶಿ ದೇವಜನ ಮೋಹನ್, ಖಜಾಂಚಿ ನಡುಮನೆ ಕಾರ್ಯಪ್ಪ, ಮಾಜಿ ಅಧ್ಯಕ್ಷ ಬಳಪದ ಮಂದಣ್ಣ, ನಿರ್ದೇಶಕರುಗಳಾದ ಕಾಳೇರಮ್ಮನ ವಸಂತ್, ಪೂಳಕಂಡ್ರ ಜನಾರ್ಧನ ಮತ್ತಿತರರಿದ್ದರು. ನಂಬುಡಿಮನೆ ಲಕ್ಷಿ ತಂಡ ಪ್ರಾರ್ಥಿಸಿ, ಕರ್ಣಯ್ಯನ ವಿಮಲ ರವಿ ನಿರೂಪಿಸಿದರು. ಅನುಸೂಯ ಪ್ರಭಾಕರ್ ಸ್ವಾಗತಿಸಿ, ಪೂಳಕಂಡ್ರ ಜನಾರ್ಧನ ವಂದಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಪಾಲ್ಗೊಂಡಿದ್ದರು. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಳಿಕ ಕೊಡಗು ಗೌಡ ವಿದ್ಯಾ ಸಂಘ ಹಾಗೂ ಸುದರ್ಶನ ಗೌಡ ಕೂಟದ ಬೇಡಿಕೆಗಳನ್ನು ಆಲಿಸಿದ ಶಾಸಕರು, ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆಯಿತ್ತರು.