ಕಾರ್ಗಿಲ್‌ನಲ್ಲಿ ರಾತ್ರಿ ವೇಳೆ ಇಳಿದ ವಿಮಾನ

ನವದೆಹಲಿ, ಜ. ೭: ಭಾರತೀಯ ವಾಯುಪಡೆಯ ಸಿ-೧೩೦ ಜೆ ಸೂಪರ್ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟಿçಪ್‌ನಲ್ಲಿ ಇಳಿದಿದೆ. ವಾಯುಪಡೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಗರುಡ ಕಮಾಂಡೊಗಳಿದ್ದ ಈ ವಿಮಾನವನ್ನು ಕಾರ್ಗಿಲ್‌ನಲ್ಲಿ ಇಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಅತ್ಯಾಧುನಿಕ ಲ್ಯಾಂಡಿAಗ್ ವ್ಯವಸ್ಥೆಯಲ್ಲಿ (ಎಎಲ್‌ಜಿ) ವಾಯುಪಡೆಯ ಈ ವಿಮಾನವು ಈ ಹಿಂದೆ ಇಳಿದಿದ್ದರೂ ರಾತ್ರಿ ವೇಳೆ ಇಳಿದಿರುವುದು ಇದೇ ಮೊದಲು ಎಂದಿವೆ. ಕಾರ್ಗಿಲ್‌ನ ಏರ್‌ಸ್ಟಿçಪ್ ಸುಮಾರು ೧೦,೫೦೦ ಅಡಿ ಎತ್ತರದಲ್ಲಿದೆ. ಗರುಡ ಕಮಾಂಡೊಗಳ ತರಬೇತಿಯ ಅಂಗವಾಗಿ ಸಿ-೧೩೦ ಜೆ ವಿಮಾನವು ಇತ್ತೀಚೆಗೆ ರಾತ್ರಿ ವೇಳೆ ಭೂಪ್ರದೇಶಕ್ಕೆ ಗೋಚರವಾಗದ ರೀತಿಯಲ್ಲಿ ಕಾರ್ಗಿಲ್‌ನಲ್ಲಿ ಇಳಿದಿದೆ ಎಂದು ವಾಯುಪಡೆಯು ‘ಎಕ್ಸ್’ ವೇದಿಕೆಯಲ್ಲಿ ಹೇಳಿದೆ.

ಆಲಮಟ್ಟಿ ಅಣೆಕಟ್ಟಿನಿಂದ ೨.೭೫ ಟಿಎಂಸಿ ನೀರು ಬಿಡುಗಡೆ

ಬೆಂಗಳೂರು, ಜ. ೭: ಕೃಷ್ಣಾ ಜಲಾನಯನ ಪ್ರದೇಶದ (ಬಾಗಲಕೋಟೆ, ಕಲ್ಬುರ್ಗಿ ಮತ್ತು ವಿಜಯಪುರ) ರೈತರ ಸಮಸ್ಯೆಗಳನ್ನು ಪರಿಹರಿಸಲು ಆಲಮಟ್ಟಿ ಅಣೆಕಟ್ಟಿನಿಂದ ೨.೭೫ ಟಿಎಂಸಿ ನೀರನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ತಿಳಿಸಿದರು. ಕೃಷ್ಣಾ ಜಲಾನಯನ ಪ್ರದೇಶದ ತೀವ್ರ ನೀರಿನ ಕೊರತೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಶನಿವಾರ ಎಲ್ಲ ಪಕ್ಷಗಳ ಶಾಸಕರು, ರೈತ ಮುಖಂಡರ ಜೊತೆಗೆ ಸಭೆ ನಡೆಸಲಾಗಿದ್ದು, ವಾಸ್ತವ ಪರಿಸ್ಥಿತಿ ವಿವರಿಸಿ ನೀರು ಬಿಡಲು ಒತ್ತಾಯಿಸಿದ್ದಾರೆ. ರೈತರ ರಕ್ಷಣೆ ಉದ್ದೇಶದಿಂದ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದರು. ಆಲಮಟ್ಟಿ, ನಾರಾಯಣಪುರ ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿನ ಪ್ರಮುಖ ಜಲಾಶಯಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸ್ತುತ ಶೇ. ೫೦ಕ್ಕೂ ಅಧಿಕ ನೀರಿನ ಸಂಗ್ರಹ ಕೊರತೆ ಎದುರಿಸುತ್ತಿದ್ದು, ರಾಜ್ಯ ಜಲ ನೀತಿಯ ಆದ್ಯತೆಗೆ ಒತ್ತು ನೀಡಲಾಗಿದೆ. ಕುಡಿಯುವ ನೀರು, ಮುಂಬರುವ ಬೇಸಿಗೆಯಲ್ಲಿ ಸಾರ್ವಜನಿಕ ಬಳಕೆ ಮತ್ತು ಜಾನುವಾರುಗಳಿಗೆ ನೀರಿನ ಸಂಪನ್ಮೂಲಗಳನ್ನು ಸುರಕ್ಷಿತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಕೇಂದ್ರ ಸಚಿವರೊಂದಿಗೆ ಹೆಚ್.ಡಿ.ಕೆ. ಮಾತುಕತೆ

ಬೆಂಗಳೂರು, ಜ ೭: ಕೇಂದ್ರ ಬುಡಕಟ್ಟು ವ್ಯವಹಾರ ಹಾಗೂ ಕೃಷಿ- ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಅರ್ಜುನ್ ಮುಂಡಾ ಭಾನುವಾರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊAಡಿರುವ ಕುಮಾರಸ್ವಾಮಿ, ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವುದು, ರಾಜ್ಯದ ತೆಂಗು ಬೆಳೆಗಾರರಿಂದ ಕೊಬ್ಬರಿ ಖರೀದಿ ಹಾಗೂ ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ವೀಡಿಯೋ ವೈರಲ್-ಮಾಜಿ ಶಾಸಕನ ಅಮಾನತ್ತು

ಜೈಪುರ, ಜ. ೭: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೇವಾರಂ ಜೈನ್ ಅವರನ್ನು ರಾಜಸ್ಥಾನ ಕಾಂಗ್ರೆಸ್ ಅಮಾನತು ಮಾಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಶನಿವಾರ ತಡರಾತ್ರಿ ಅಮಾನತ್ತು ಮಾಡಿ ಆದೇಶಿಸಿದ್ದಾರೆ. ಮೇವಾರಂ ಅವರ ಅನೈತಿಕ ನಡತೆ ಕಾಂಗ್ರೆಸ್‌ನ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಮಹಿಳೆಯು ಆತನ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ ದಿನಗಳ ನಂತರ ಜನವರಿ ೫ ರಂದು ಮಾಜಿ ಶಾಸಕನ ಅಶ್ಲೀಲ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಡಿಸೆಂಬರ್ ೨೦ ರಂದು ಜೋಧ್‌ಪುರದಲ್ಲಿ ಮೇವಾರಂ ವಿರುದ್ಧ ಮಹಿಳೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ಮೇವಾರಂ ಶಾಸಕರಾಗಿದ್ದಾಗ ಅವರು ತಮ್ಮ ಪ್ರಭಾವದಿಂದ ಯಾವುದೇ ಕ್ರಮ ಕೈಗೊಳ್ಳದಂತೆ ನೋಡಿಕೊಂಡಿದ್ದರು, ಅಲ್ಲದೇ ತನ್ನ ವಿರುದ್ಧ ಲೈಂಗಿಕ ಚಟುವಟಿಕೆ ಆರೋಪ ಹೊರಿಸಿ ಬಂಧಿಸಲಾಗಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.

ಸಿಪಿಎಂ ಮುಖಂಡನಿಗೆ ಇ.ಡಿ. ಸಮನ್ಸ್

ಕೊಚ್ಚಿ, ಜ. ೭: ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬAಧಿಸಿ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಪಿಎಂ ಮುಖಂಡ ಥಾಮಸ್ ಐಸಾಕ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಕೊಚ್ಚಿಯಲ್ಲಿರುವ ಇ.ಡಿ. ಕಚೇರಿಗೆ ತಾ. ೧೨ ರಂದು ಹಾಜರಾಗಿ ಹೇಳಿಕೆ ನೀಡುವಂತೆ ಥಾಮಸ್ ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಥಾಮಸ್ ಅವರು ಎಲ್‌ಡಿಎಫ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಈ ಅವ್ಯವಹಾರ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇಮಿಗಳೆಂದು ಅಕ್ಕ-ತಮ್ಮನ ಮೇಲೆ ಹಲ್ಲೆ

ಬೆಳಗಾವಿ, ಜ. ೭: ಇಲ್ಲಿನ ಕೋಟೆ ಕೆರೆಯ ಉದ್ಯಾನದಲ್ಲಿ ಮಾತನಾಡುತ್ತ ಕುಳಿತ್ತಿದ್ದ ಅಕ್ಕ ತಮ್ಮನನ್ನು ಪ್ರೇಮಿಗಳೆಂದು ತಿಳಿದು ಅಪಹರಿಸಿಕೊಂಡು ಹೋಗಿ, ಥಳಿಸಿದ ಪ್ರಕರಣ ಸಂಬAಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ೧೭ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬAಧ ಭಾನುವಾರ ಎಂಟು ಮಂದಿಯನ್ನು ಬಂಧಿಸಿದ್ದೇವೆ. ೧೭ ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್. ಸಿದ್ರಾಮಪ್ಪ ತಿಳಿಸಿದರು.

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ-ಬೊಮ್ಮಾಯಿ

ಹುಬ್ಬಳ್ಳಿ, ಜ. ೭: ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಸರ್ಕಾರ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಏಳೇ ತಿಂಗಳಲ್ಲಿ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಇದು ದಬ್ಬಾಳಿಕೆಯ ಸರ್ಕಾರ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ‍್ಯಕ್ಕೆ ಧಕ್ಕೆ ಆಗುತ್ತಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಅವರ ವಿರುದ್ಧ ಕೇಸ್ ಹಾಕುತ್ತಿದ್ದಾರೆ. ಈ ಸರ್ಕಾರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಇದೆ. ಕರ್ನಾಟಕದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಕೇಸ್ ಒಂದು. ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲದಿದ್ದರೂ, ಅವರನ್ನು ಒಳಗಡೆ ಹಾಕಿದರು. ಇದು ಎಮರ್ಜೆನ್ಸಿಯಲ್ಲಿ ಮಾತ್ರ ಸಾಧ್ಯ ಎಂದರು.

ಮೋದಿಯ ಅವಹೇಳನ-ಮಾಲ್ಡೀವ್ಸ್ನ ಮೂವರು ಸಚಿವರ ಅಮಾನತ್ತು

ಮಾಲೆ, ಜ. ೭: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತ್ತುಗೊಳಿಸಿದೆ. ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅಲ್ಲಿನ ಕಳೆದ ಕ್ಷಣಗಳ ವೀಡಿಯೋ ಮತ್ತು ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊAಡಿದ್ದರು. ಈ ಭೇಟಿಯ ಕುರಿತಂತೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಮಲ್ಯಾ ಷರೀಫ್, ಮರಿಯಮ್ ಶಿಯುನಾ ಮತ್ತು ಮಹಜೂಮ್ ಮಜೀದ್ ಅವರು ಪ್ರಧಾನಿ ಮೋದಿ ಮತ್ತು ಭಾರತವನ್ನು ಟೀಕಿಸಿದ್ದರು. ಸಚಿವರ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಸಚಿವರನ್ನು ಅಮಾನತುಗೊಳಿಸಲಾಗಿದೆ.