ಯಾವುದೇ ದೇವಾಲಯಕ್ಕೆ ಹೋದರೂ ದೇವಾನುದೇವತೆಗಳಿಗೆ ಪೂಜೆ, ಪ್ರಾರ್ಥನೆಯಾದ ಬಳಿಕ ತೀರ್ಥ ಪ್ರಸಾದ ವಿತರಣೆಯಾಗುತ್ತದೆ. ಕೆಲವೊಂದು ದೇವಾಲಯಗಳಲ್ಲಿ ದೇವರ ಪ್ರಸಾದವೇ ಭಕ್ತಗÀಣಕ್ಕೆ ಆಕರ್ಷಣೆಯಾಗುತ್ತದೆ.

ತಿರುಪತಿಯಂಥ ದೇವಾಲಯಗಳಲ್ಲಿ ಲಡ್ಡು ಪ್ರಸಾದವೇ ಮುಖ್ಯವಾಗಿ ಭಕ್ತರ ಮನವನ್ನು ಸೆಳೆಯುತ್ತದೆ. ಇಂಥ ಪ್ರಸಾದವನ್ನು ವಾಪಾಸ್ ಬರುವಾಗ ಮನೆಗೆ ತಂದು ಬಂಧುಮಿತ್ರರಿಗೂ ಹಂಚುವುದಿದೆ.

ಹೀಗಿರುವಾಗ ಭಾರತದ ಪ್ರಮುಖ ಹಿಂದೂ ದೇವಾಲಯವಾಗಿ ಇದೇ ತಾ.೨೨ ರಂದು ಭಕ್ತರಿಗೆ ಅರ್ಪಣೆಯಾಗುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ದೇವರ ಭಕ್ತರಿಗೆ ಪ್ರಸಾದ ಯಾವ ರೀತಿಯದ್ದು ದೊರಕಬಹುದು ಎಂಬ ಕುತೂಹಲ ಸಹಜವೇ. ದೇವಾಲಯಕ್ಕೆ ಹೋಗಿ ಭಕ್ತಿಭಾವದಿಂದ ಪ್ರಾರ್ಥಿಸಿದ ಕುರುಹಾಗಿ ದೊರಕುವ ಪ್ರಸಾದಕ್ಕೂ ತನ್ನದೇ ಪ್ರಾಧಾನ್ಯತೆ ಇರುತ್ತದೆ.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದಿನನಿತ್ಯ ಬರುವ ಭಕ್ತರಿಗೆ ಕಲ್ಲುಸಕ್ಕರೆಯ ಪ್ರಸಾದ ನೀಡಲು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ.

ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ವಿತರಿಸುವ ಮೂಲಕ ಭಕ್ತರಿಗೆ ಸಿಹಿ ಉಣಬಡಿಸಲು ನಿರ್ಧರಿಸಲಾಗಿದೆ. ಉತ್ತರ ಭಾರತದಲ್ಲಿ ಕಲ್ಲುಸಕ್ಕರೆ ವಿಶೇಷವಾಗಿದೆ. ಇದನ್ನೇ ಶ್ರೀರಾಮಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಪ್ರಸಾದವಾಗಿ ಕಲ್ಲುಸಕ್ಕರೆ ಸವಿದ ಬಳಿಕ ಮನೆಗೆ ಪ್ರಸಾದ ತೆಗೆದುಕೊಂಡು ಹೋಗಲು ಶ್ರೀರಾಮಂದಿರ ಸಂಕೀರ್ಣದಲ್ಲಿರುವ ಪ್ರಸಾದದ ಸೇವಾ ಕೇಂದ್ರದಿAದ ಖರೀದಿಸಲು ಅವಕಾಶವಿದೆ ಎನ್ನುತ್ತಾರೆ ಟ್ರಸ್ಟ್ ನ ಸದಸ್ಯರಾಗಿರುವ ಉಡುಪಿಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ. ಕಲ್ಲುಸಕ್ಕರೆ ಹೊರತುಪಡಿಸಿದರೆ ಬೇರಾವುದೇ ಪ್ರಸಾದ ಇಲ್ಲಿ ದೊರಕುವುದಿಲ್ಲ.

ಹಲವು ದೇವಾಲಯಗಳಲ್ಲಿ ವಿವಿಧ ರೀತಿಯ ಸೇವೆಗಳು ಇದ್ದೇ ಇರುತ್ತವೆ. ಉದಾಹರಣೆಗೆ ಕುಂಕುಮಾರ್ಚನೆ, ಬಿಲ್ವಾರ್ಚನೆ, ತುಲಾಭಾರ ಸೇವೆ ಇತ್ಯಾದಿ... ಅಯೋಧ್ಯೆಯಲ್ಲಿನ ಶ್ರೀ ರಾಮದೇವಾಲಯದಲ್ಲಿ ಭಕ್ತರಿಗೆ ಇಂಥ ಯಾವೆಲ್ಲಾ ಸೇವೆಗಳು ಲಭ್ಯ ಎಂಬ ಪ್ರಶ್ನೆಗೆ ಕುತೂಹಲಕಾರಿ ಉತ್ತರ ದೊರಕುತ್ತದೆ.

ಶ್ರೀ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಸೇವೆಗಳೇನೂ ಇರುವುದಿಲ್ಲ. ಆದರೆ, ಶ್ರೀರಾಮನಿಗೆ ಕಲಾಶಾಭಿಷೇಕ ಸೇವೆಗೆ ವ್ಯವಸ್ಥೆ ಇರುತ್ತದೆ.

ದೇವರಿಗೆ ಮಾಡುವ ಪ್ರತೀ ಕಲಶಾಭಿಷೇಕಕ್ಕೆ ೧ ಲಕ್ಷ ರೂ. ಮೊತ್ತವಿದೆ. ಹೀಗೇಕೆ ಎಂದರೆ, ಕಲಶಾಭಿಷೇಕದ ಮೂಲಕ ಸಂದಾಯವಾಗುವ ಮೊತ್ತದಲ್ಲಿ ನಿರ್ಗತಿಕರಿಗೆ ೧೦ ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ಉದ್ದೇಶವನ್ನು ಶ್ರೀರಾಮ ಟ್ರಸ್ಟ್ ಹೊಂದಿದೆ. ಅಂತೆಯೇ ಗೋಶಾಲೆ, ಬಡ ಮಕ್ಕಳ ಶಿಕ್ಷಣ, ವೈದ್ಯಕೀಯ ಸೇವಾ ಯೋಜನೆಗಳನ್ನು ಜಾರಿಗೊಳಿಸಲು ಶ್ರೀರಾಮಮಂದಿರಕ್ಕೆ ಭಕ್ತರು ನೀಡುವ ದೇಣಿಗೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಹಾಗಿದ್ದರೆ ಯಾರು ಬೇಕಾದರೂ ೧ ಲಕ್ಷ ರೂ. ನೀಡಿ ದೇವರಿಗೆ ಕಲಶಾಭಿ ಷೇಕ ನೆರವೇರಿಸಬಹುದೇ ಎಂದರೆ ಅದಕ್ಕೂ ಕೆಲವು ಮಾನದಂಡಗಳನ್ನು ಟ್ರಸ್ಟ್ ವಿಧಿಸಿದೆ. ಸಮಾಜಸೇವೆ ಮಾಡಿದವರಿಗೆ ಮಾತ್ರ ಕಲಶಾಭಿಷೇಕ ಮಾಡಲು ಅವಕಾಶ ಇದೆ. ಅಂದರೆ ದುಡ್ಡು ಇದೆ ಎಂದ ಮಾತ್ರಕ್ಕೆ ಶ್ರೀರಾಮನಿಗೆ ಕಲಶ ಸೇವೆ ಮಾಡುವಂತಿಲ್ಲ. ಬದಲಿಗೆ, ಕಲಶಾಭಿಷೇಕ ಮಾಡಬೇಕಾದರೆ ಅಂಥವರು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಿರಬೇಕು.

ಸಮಾಜಸೇವೆ ಹೇಗಿರಬೇಕು ಎಂಬುದನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿವರಿಸಿ ಹೇಳುವುದು ಹೀಗೆ..

ರಜತ ಕಲಶಕ್ಕೆ ೧ ಲಕ್ಷ ರೂ. ಎಂದು ಇಟ್ಟುಕೊಳ್ಳೋಣ. ಅದರ ಹತ್ತು ಪಟ್ಟು ಅಂದರೆ ೧೦ ಲಕ್ಷ ರೂ.ಗಳಷ್ಟು ಮೌಲ್ಯದ ಸಮಾಜ ಸೇವೆಯನ್ನು ಸೇವಾಕರ್ತ ಮಾಡಿ ರಬೇಕು. ೨೦೨೩-೨೪ನೇ ಸಾಲಿನಲ್ಲಿ ಇಂಥ ಸಾಮಾಜಿಕ ಸೇವಾ ಕಾರ್ಯ ಮಾಡಿದ್ದಾಗಿರಬೇಕು. ಇಂಥಹ ಸಮಾಜಸೇವೆ ಮಾಡಿದ್ದೇನೆ ಎಂದು ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣ ಪತ್ರ ತರಬೇಕು. ಹೀಗಿದ್ದರೆ ಮಾತ್ರ ಅಂಥವರಿಗೆ ಶ್ರೀರಾಮನಿಗೆ ಕಲಶಾಭಿಷೇಕ ಮಾಡಲು ಅವಕಾಶ ಇರುತ್ತದೆ. ಅಂಥವರು ಸೇವೆ ಮುಗಿದ ಬಳಿಕ ಕಳಸವನ್ನು ಮನೆಗೆ ಕೊಂಡೊಯ್ದು ಮನೆಯಲ್ಲಿ ಪ್ರಸಾದ ರೂಪದಲ್ಲಿ ಶಾಶ್ವತವಾಗಿ ಕಲಶ ಇಟ್ಟುಕೊಳ್ಳಬಹುದು.

ಯಾರು ಸಮಾಜದಲ್ಲಿ ಜನೋಪಯೋಗಿ ಸೇವೆಗಳನ್ನು ಮಾಡಿರುತ್ತಾರೋ, ಯಾರು ಸಮಾಜ ಸೇವಾಕರ್ತರಾಗಿರುತ್ತಾರೆಯೋ ಅಂಥಹ ಜನಸೇವಕರಿಗೆ ಮಾತ್ರ ಶ್ರೀರಾಮನಿಗೆ ಕಲಶಾಭಿಷೇಕಕ್ಕೆ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ರೀತಿಯಲ್ಲಿಯೂ ಹರಕೆ ಅಥವಾ ಇತರ ಸೇವೆಗಳು ಶ್ರೀರಾಮ ದೇವಾಲಯದಲ್ಲಿ ಇರುವುದಿಲ್ಲ ಎಂದೂ ಸ್ವಾಮೀಜಿ ಸ್ಪಷ್ಟಪಡಿ ಸುತ್ತಾರೆ. ಇಷ್ಟಕ್ಕೂ ಯಾಕೆ ಇಂಥ ಸೇವೆ ಅತ್ಯಗತ್ಯ ಎಂಬುದಕ್ಕೂ ಸ್ಪಷ್ಟ ಉತ್ತರ ಸ್ವಾಮೀಜಿ ಬಳಿಯಿದೆ.

ಅಯೋಧ್ಯೆಯ ಶ್ರೀರಾಮಚಂದ್ರನ ದರ್ಶನಕ್ಕೆ ಹೋದಾಗ ಶ್ರೀರಾಮ ಪ್ರಭುವೇ ನಾನು ನಿನ್ನ ಹೆಸರಿನಲ್ಲಿ ಸಮಾಜಕ್ಕೆ, ಸಮಾಜ ಬಾಂಧವರಿಗೆ ಇಂಥಹ ಸತ್ಕಾರ್ಯ ಮಾಡಿದ್ದೇನೆ. ಈ ಸೇವಾ ಕಾರ್ಯ ನಿನಗೇ ಅರ್ಪಿತವಾಗಿದೆ ಎಂದು ಹೇಳಿದಾಗ ಅದು ಶ್ರೀರಾಮನಿಗೆ ನಿಜವಾದ ಸೇವೆ ಎನಿಸುತ್ತದೆ. ಇಂಥಹ ಸೇವೆಯನ್ನು ಒಬ್ಬ ಸೇವಾಕರ್ತ ಮಾಡಬಹುದು ಅಥವಾ ಸಾಮೂಹಿಕವಾಗಿ, ಗುಂಪಾಗಿಯೂ ಮಾಡಲು ಅವಕಾಶವಿದೆ ಎನ್ನುತ್ತಾರೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ.

೧ ಲಕ್ಷ ರೂ. ದುಡ್ಡು ಹೆಚ್ಚೆನಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವ ಸ್ವಾಮೀಜಿ, ಖಂಡಿತಾ ಇಲ್ಲಿ ಹಣ ಮುಖ್ಯವೇ ಅಲ್ಲ. ಸಮಾಜಸೇವೆಯೇ ಶ್ರೀರಾಮನ ಸೇವೆಗೆ ಮುಖ್ಯ. ಈ ರೀತಿ ದೇವಾಲಯವು ಸಂಗ್ರಹಿಸುವ ಹಣದಲ್ಲಿ ಬಡವರಿಗೆ ಮನೆ, ಶಾಲೆ, ಆಸ್ಪತ್ರೆ ನಿರ್ಮಿಸುವ ಉದ್ದೇಶವಿದೆ. ಗೋವುಗಳನ್ನು ದತ್ತು ಪಡೆದು ಸುಸಜ್ಜಿತ ಗೋಶಾಲೆಯನ್ನು ನಿರ್ಮಿಸುವ ಉದ್ದೇಶವಿದೆ. ಎಲ್ಲವನ್ನೂ ಸರ್ಕಾರದ ಅನುದಾನದಿಂದಲೇ ನಿರೀಕ್ಷಿಸದೇ ಭಕ್ತರು ತಾವಾಗಿಯೇ ನೀಡುವ ಆರ್ಥಿಕ ನೆರವಿನಿಂದ ಶ್ರೀರಾಮನ ಸನ್ನಿಧಿಯಲ್ಲಿ ಸಲ್ಲಿಸಲ್ಪಡುವ ಸೇವೆಯ ಮೂಲಕ ಸಾವಿರಾರು ಮಂದಿಗೆ ಪ್ರಯೋಜನವಾಗುವ ಯೋಜನೆಯನ್ನು ಟ್ರಸ್ಟ್ ರೂಪಿಸಿದೆ ಎನ್ನುತ್ತಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬೇರೆ ದೇವಾಲಯಗಳಂತೆ ಶ್ರೀ ರಾಮಮಂದಿರದಲ್ಲಿ ದೇವರಿಗೆ ಸಲ್ಲಿಸಲಾಗುವ ವಿವಿಧ ಸೇವೆಗಳು, ಹರಕೆಗಳ ಮಾಹಿತಿ ಫಲಕ ಇರುವುದಿಲ್ಲ!

ಬಡವನೋರ್ವನಿಗೆ ಮನೆ ನಿರ್ಮಿಸಿ ಕೊಟ್ಟರೆ ಜೀವಮಾನವಿಡೀ ಆತನ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಶ್ರೀರಾಮನಿಗೆ ಈ ರೀತಿಯ ಸೇವೆ ಸಲ್ಲಿಸಿದ ಮನ ಸಂತೃಪ್ತಿಯೂ ಸೇವಾಕರ್ತನಲ್ಲಿರುತ್ತದೆ ಎಂಬ ಚಿಂತನೆಯೇ ಅಮೋಘವಾದದ್ದು ಅಲ್ಲವೇ..?

್ಡ ಅನಿಲ್ ಎಚ್.ಟಿ.

ಮೊ.: ೯೮೪೪೦೬೦೧೭೪