ಮಡಿಕೇರಿ, ಜ. ೭: ಬಿಲ್ಲವ ಸಮಾಜ ಸೇವಾ ಸಂಘ ಮಡಿಕೇರಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕೋಟಿ ಚೆನ್ನಯ್ಯ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಅಮ್ಮತ್ತಿಯ ಚಂದನ್ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸ್ಕಾರ್ಪಿಯನ್ ಸುಂಟಿಕೊಪ್ಪ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ವಾಲಿಬಾಲ್ನಲ್ಲಿ ಸುಂಟಿಕೊಪ್ಪ ಪ್ಯಾಂರ್ಸ್ ಪ್ರಥಮ, ಭಗವತಿ ಟೀಂ ಬಿಲ್ಲವ ದ್ವಿತೀಯ ಸ್ಥಾನ ಪಡೆಯಿತು. ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಹೊಟೇಲ್ ಉದ್ಯಮಿ ಶಂಕರ್ ಪೂಜಾರಿ ನೆರವೇರಿಸಿದರು. ಜನಾಂಗದಲ್ಲಿರುವ ಪ್ರತಿಭೆಗಳನ್ನು ಹೊರತರಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆ ಎಂದು ಅವರು ಹೇಳಿದರು. ಬಿಲ್ಲವ ಸಮಾಜ ಸೇವಾ ಸಂಘ ಮಡಿಕೇರಿಯ ಅಧ್ಯಕ್ಷೆ ಬಿ.ಎಸ್. ಲೀಲಾವತಿ ಮಾತನಾಡಿ, ಸಂಘದ ಸಮಗ್ರ ಅಭಿವೃದ್ಧಿ ಹಿರಿಯರು ಹಾಗೂ ಕಿರಿಯರು ಕೈ ಜೋಡಿಸಬೇಕೆಂದರು. ವೇದಿಕೆಯಲ್ಲಿ ನಾಪೋಕ್ಲು ಹೋಬಳಿ ಅಧ್ಯಕ್ಷ ಬಿ.ಎಂ. ಪ್ರದೀಪ್, ಮಡಿಕೇರಿ ಘಟಕದ ಉಪಾಧ್ಯಕ್ಷರಾದ ಕೆ. ರವೀಂದ್ರ, ಬಿ.ಎಂ. ಪೂವಪ್ಪ ಉಪಸ್ಥಿತರಿದ್ದರು. ಜಯಶ್ರೀ ಪ್ರಾರ್ಥಿಸಿ, ಬಿ.ಎಸ್. ಜಯಪ್ಪ ನಿರೂಪಿಸಿ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಾಂಧವ್ಯ ವೃದ್ಧಿಸಲು ಕ್ರೀಡೆ ಸಹಕಾರಿಯಾಗಿದ್ದು. ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಬಗ್ಗೆ ಅಭಿಮಾನವಿರಬೇಕು ಎಂದರು. ದೃಶ್ಯ ಮಾಧ್ಯಮದಲ್ಲಿನ ಸಾಧನೆಗಾಗಿ ವಿಶ್ವಕುಂಬೂರು ಕ್ರೀಡೆಯಲ್ಲಿನ ಸಾಧನೆಗಾಗಿ ಮೇಘನಾ, ಗಗನ್ ಇವರುಗಳನ್ನು ಸನ್ಮಾನಿಸಲಾಯಿತು. ಬಿಲ್ಲವ ಸಂಘದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಿರಿಯರಾದ ಬಿ.ಸಿ. ಚೆನ್ನಪ್ಪ, ಕೆ. ಸದಾನಂದ ಬಂಗೇರ, ಶೇಷಪ್ಪ, ಹೇಮಾ, ರತ್ನಾ, ವಿಜಯ, ಸರೋಜ ಇವರುಗಳನ್ನು ಕೂಡ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ವಿನೋದ್ಕುಮಾರ್, ಕೆ. ರವೀಂದ್ರ, ಬಿ.ಎಂ. ಪೂವಪ್ಪ, ಬಿ.ಎಸ್. ರಮೇಶ್, ಶೇಷಪ್ಪ ಉಪಸ್ಥಿತರಿದ್ದರು. ರೂಪ ಮತ್ತು ಚಿತ್ರ ಆರ್ಯನ್ ಪ್ರಾರ್ಥಿಸಿ, ಬಿ.ಕೆ. ಮಹೇಶ್ ಸ್ವಾಗತಿಸಿ, ಪಿ.ಆರ್. ಆನಂದ ವಂದಿಸಿದರು.