ಪೊನ್ನAಪೇಟೆ, ಜ. ೭: ಕೆಲಸ ಕೊಡಿಸುತ್ತೇನೆ ಎಂದು ಹಣ ಪಡೆದು ವಂಚಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. ಕೇರಳ ರಾಜ್ಯದ ಚೆರುಕುನ್ನು ಗ್ರಾಮದ ಜಿಜೇಶ್ ಎಂ.ವಿ. ಬಂಧಿತ ಆರೋಪಿ.

ಘಟನೆ ವಿವರ : ಕೆಲವು ತಿಂಗಳ ಹಿಂದೆ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಕೆ.ಎಂ. ಹಸನ್ ಎಂಬವರಿಗೆ ಅದೇ ಗ್ರಾಮದ ಸಾಲಿ ಎಂಬವರು ನಿನ್ನ ಮಗನಿಗೆ ಕೆಲಸ ಕೊಡಿಸಬೇಕಾದರೆ ಜಿಜೇಶ್‌ನನ್ನು ಸಂಪರ್ಕಿಸಿದರೆ ಕೆಲಸ ಕೊಡಿಸುತ್ತಾನೆ ಎಂದು ಹೇಳಿ ಕೇರಳ ಮೂಲದ ಜಿಜೇಶ್ ಮೊಬೈಲ್ ಸಂಖ್ಯೆಯನ್ನು ಹಸನ್‌ಗೆ ನೀಡಿದ್ದರು. ಹಸನ್ ಜಿಜೇಶ್‌ನಿಗೆ ಕರೆ ಮಾಡಿ ತನ್ನ ಮಗನಿಗೆ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದರು. ಜಿಜೇಶ್ ಮಗನಿಗೆ ಕೊಚ್ಚಿ ಅಥವಾ ಮಂಗಳೂರಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದನು. ಕೆಲಸ ಕೊಡಿಸಲು ಸುಮಾರು ೫೦ ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದ್ದನು. ಆಗ ಹಸನ್ ತಮ್ಮ ಊರಿನವನಾದ ಸಾಲಿಗೆ ಈ ಬಗ್ಗೆ ತಿಳಿಸಿದಾಗ, ಆತ ಕೂಡ ತನ್ನ ತಂಗಿ ಮಗನಿಗೂ ಕೆಲಸ ಕೊಡಿಸಲು ಜಿಜೇಶನಿಗೆ ಹಣ ಕೊಟ್ಟಿರುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿದ್ದ ಮಗನಿಗೆ ಕೆಲಸ ಕೊಡಿಸುವ ಉದ್ದೇಶದಿಂದ ಜಿಜೇಶನ ಮೊಬೈಲ್ ನಂಬರಿಗೆ ತಾ. ೧೫.೦೫.೨೦೨೩ ರಂದು ರೂ. ೩೩,೪೦೦ ಅನ್ನು ಜಿಜೇಶನು ನೀಡಿದ ಮೊಬೈಲ್ ನಂಬರ್ ಗೆ ಗೂಗಲ್ ಪೇ ಮಾಡಿದ್ದರು. ನಂತರ ತಾ.೧೬.೦೫.೨೩ ರಂದು ರೂ.೨೧,೩೦೦ ಹಣವನ್ನು ಗೂಗಲ್ ಪೇ ಮಾಡಿದ್ದರು. ಒಟ್ಟು ರೂ.೫೦,೭೦೦ ಹಣಕೊಟ್ಟು ತಿಂಗಳು ಕಳೆದರೂ ಜಿಜೇಶನು ಹಸನ್ ಅವರ ಮಗನಿಗೆ ಕೆಲಸ ಕೊಡಿಸಿರಲಿಲ್ಲ. ಆತನ ಮೊಬೈಲ್ ನಂಬರ್‌ಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತಿತ್ತು. ಹಸನ್ ಜಿಜೇಶನ ಬಗ್ಗೆ ಎಲ್ಲಾ ಕಡೆ ವಿಚಾರಿಸಿ ಆತನ ಸುಳಿವು ಸಿಗದ ಕಾರಣ ತಾ.೨೮.೦೭.೨೦೨೩ ರಂದು ಈ ಬಗ್ಗೆ ಪೊನ್ನಂಪೇಟೆಯಲ್ಲಿ ದೂರು ನೀಡಿದ್ದರು.

ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು. ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕೂಡ ತನಿಖೆ ಚುರುಕುಗೊಳಿಸಿ ಆರೋಪಿಯನ್ನು ಪತ್ತೆ ಹಚ್ಚುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ ಪೊಲೀಸರು ಕೇರಳ ರಾಜ್ಯದ ತ್ರಿಸೂರ್‌ನಿಂದ ಆರೋಪಿ ಜಿಜೇಶ್‌ನನ್ನು ಬಂಧಿಸಿ ಠಾಣೆಗೆ ಕರೆತಂದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೊಡಗು ಎಸ್.ಪಿ. ರಾಮರಾಜನ್, ಅಡಿಷನಲ್ ಎಸ್.ಪಿ. ಸುಂದರ್ ರಾಜ್ ಅವರ ನಿರ್ದೇಶನದ ಮೇರೆಗೆ, ಡಿ.ವೈ.ಎಸ್.ಪಿ. ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಸಬ್ ಇನ್ಸ್ಪೆಕ್ಟರ್ ನವೀನ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಬಸಮ್ಮ, ಮಂಜು ಭಾಗವಹಿಸಿದ್ದರು. -ಚನ್ನನಾಯಕ