ಸಿದ್ದಾಪುರ, ಜ. ೭: ಖಾವಿ ಬಟ್ಟೆ ಧರಿಸಿ ಸ್ವಾಮೀಜಿಯಂತೆ ಬಂದು ವ್ಯಕ್ತಿಯೋರ್ವನಿಗೆ ಹೂ ನೀಡಿ ಮಂಕು ಬರಿಸಿ ಕುಸಿದು ಬೀಳುವಂತೆ ಮಾಡಿ ಬಳಿಕ ಆತನಿಂದಲೇ ಹಣ ಪಡೆದ ಅಚ್ಚರಿಯ ಘಟನೆಯೊಂದು ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಅನಾಮಿಕ ಖಾವಿಧಾರಿಯೋರ್ವ ಸ್ವಾಮೀಜಿಯ ರೀತಿಯಲ್ಲಿ ವಾಲ್ನೂರು ಗ್ರಾಮಕ್ಕೆ ಕಾರಿನಲ್ಲಿ ಅಗಮಿಸಿದ್ದರು. ಗ್ರಾಮದ ರಾಜಣ್ಣ ಎಂಬವರ ಮನೆಗೆ ತೆರಳಿ, ಮನೆಯ ಮಾಲೀಕರೊಂದಿಗೆ ಒಳಪ್ರವೇಶಕ್ಕೆ ಅನುಮತಿ ಕೇಳಿದರು. ಸ್ವಾಮೀಜಿಗಳು ಎಂದು ತಿಳಿದು ಮಾಲೀಕರು ಮನೆಗೆ ಬರಲು ಅವಕಾಶ ನೀಡಿದ್ದಾರೆ.
ನಂತರದಲ್ಲಿ ಮಾಲೀಕನಿಗೆ ‘ನಿಮ್ಮ ಮನೆಯಲ್ಲಿ ಹಲವಾರು ದೋಷಗಳಿವೆ, ಕುಟುಂಬವು ಆರ್ಥಿಕವಾಗಿ ಹಿಂದುಳಿದಿದೆ. ಆರೋಗ್ಯವು ಹದಗೆಡುವ ಸಾಧ್ಯತೆಗಳಿವೆ’ ಎಂದು ಹೇಳುತ್ತಾರೆ. ಮನೆಯ ಮಾಲೀಕರೊಂದಿಗೆ ಮಠಕ್ಕೆ ಧನ ಸಹಾಯ ನೀಡಿ ಎಂದು ಬಂದಿದ್ದ ವ್ಯಕ್ತಿ ಮನವಿ ಮಾಡುತ್ತಾರೆ. ನಂತರ ಜೇಬಿನಲ್ಲಿದ್ದ ನೂರು ರೂಪಾಯಿ ನೀಡಲು ಮುಂದಾಗುತ್ತಾರೆ. ಇದನ್ನು ನಿರಾಕರಿಸಿದ ವ್ಯಕ್ತಿ ಐದು ಸಾವಿರ ಹಣವನ್ನು ನೀಡಿ ಎಂದು ಒತ್ತಾಯ ಮಾಡುತ್ತಾರೆ. ಒತ್ತಾಯಕ್ಕೆ ಮಣಿದ ಮಾಲೀಕರು ಒಂದು ಸಾವಿರ ಹಣವನ್ನು ನೀಡಿ ತೋಟದ ಕೆಲಸಕ್ಕೆಂದು ತೆರಳುತ್ತಾರೆ.
ಕೆಲ ಸಮಯದ ನಂತ ರದಲ್ಲಿ ಮನೆಯ ಮಾಲೀಕನ ಪುತ್ರ ವಿಜು ಸ್ಥಳಕ್ಕೆ ಆಗ ಮಿಸಿದ ಸಂದರ್ಭ ಸ್ವಾಮೀಜಿ ವೇಷÀಧಾರಿ ನಿಮ್ಮ ತಂದೆ ಒಂದು ಸಾವಿರ ಹಣ ನೀಡಿ ತೆರಳಿದ್ದಾರೆ. ನೀವು ಐದು ಸಾವಿರ ಹಣ ನೀಡುವಂತೆ ಒತ್ತಾಯ ಮಾಡಿದ ಸಂದರ್ಭ ಹಣ ನೀಡಲು ವಿಜು ನಿರಾಕರಿಸಿದ್ದಾರೆ.
ಈ ಸಂದÀರ್ಭದಲ್ಲಿ ಮನೆಗೆ ಬಂದಿದ್ದ ವ್ಯಕ್ತಿ ತನ್ನ ಚೀಲದಲ್ಲಿಟ್ಟಿದ್ದ ಹೂ ಒಂದನ್ನು ಮಾಲೀಕನ ಪುತ್ರನ ಕೈಗೆ ನೀಡಿ ಮಂತ್ರಗಳನ್ನು ಪಠಣ ಮಾಡಿದ್ದಾರೆ. ಕೆಲವೇ ಸಮಯದಲ್ಲಿ ವಿಜು ಮಂಕು ಬಡಿದಂತಾಗಿ ಕುಸಿದು ಬಿದ್ದಿರುವದಾಗಿ ಹೇಳಲಾಗಿದೆ. ಕೆಲವು ಸಮಯದ ನಂತರದಲ್ಲಿ ಎಚ್ಚರಗೊಂಡು ತನ್ನ ಬಳಿಯಿದ್ದ ನಾಲ್ಕು ಸಾವಿರ ಹಣವನ್ನು ಸ್ವಾಮೀಜಿ ರೀತಿ ಬಂದಿದ್ದ ವ್ಯಕ್ತಿಗೆ ನೀಡಿದ್ದಾರೆ. ಹಣ ಪಡೆದುಕೊಂಡ ವ್ಯಕ್ತಿ ತನ್ನ ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಗೂಗಲ್ ಪೇ ಸಂಖ್ಯೆಗಳನ್ನು ನೀಡಿ ಸ್ಥಳದಿಂದ ತೆರಳಿದ್ದಾರೆ.
ಕೆಲವು ಸಮಯದ ನಂತರ ನೀಡಿರುವ ವಿಳಾಸ, ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕ ಮಾಡಿದರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಮೋಸವಾಗಿರುವುದು ತಿಳಿದು ಈ ಬಗ್ಗೆ ವಿಚಾರಿಸಿದಾಗ ವಾಲ್ನೂರು ಸೇರಿದಂತೆ ನಂಜರಾಯಪಟ್ಟಣದ ಕೆಲವು ಮನೆಗಳಿಗೆ ಸ್ವಾಮೀಜಿ ವೇಷದಲ್ಲಿ ತೆರಳಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮೋಸಕ್ಕೆ ಒಳಗಾದವರು ಪೊಲೀಸರಿಗೆ ಮಾಹಿತಿ ನೀಡಿ ಲಿಖಿತ ದೂರು ದಾಖಲಿಸಿದ್ದಾರೆ. ವರದಿ : ವಾಸು ಆಚಾರ್ಯ