ಶನಿವಾರಸಂತೆ, ಜ. ೬: ಪಟ್ಟಣದ ಯೂನಿಯನ್ ಬ್ಯಾಂಕ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ‘‘ನಮ್ಮ ಸಂಕಲ್ಪ ವಿಕಸಿತ ಭಾರತ’’ ಎಂಬ ಧ್ಯೇಯ ವಾಕ್ಯದಡಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾರ್ವಜನಿಕರಿಗೆ ತಳಮಟ್ಟದಿಂದ ಮಾಹಿತಿ ನೀಡುವ ಕಾರ್ಯಕ್ರಮ ನಾಡಕಚೇರಿ ಆವರಣದಲಿ ಹಮ್ಮಿಕೊಳ್ಳಲಾಗಿತ್ತು.

ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಅತ್ರೇಯ ಪ್ರಭು ಮಾತನಾಡಿ, ಯೂನಿಯನ್ ಬ್ಯಾಂಕ್‌ನಿAದ ಸಾರ್ವಜನಿಕರಿಗೆ ದೊರಕುವ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ್‌ಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಬಗ್ಗೆ ಸವಿವರ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಮುಖಂಡ ಎಸ್.ಎನ್. ರಘು ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆಗಳು ಸಂಪೂರ್ಣ ಸಹಕಾರಿಯಾಗಿವೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆ ಶಿಕ್ಷಕ ಮಾತನಾಡಿ, ಸಾರ್ವಜನಿಕರು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸರೋಜಮ್ಮ ಮಾತನಾಡಿ, ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ಬರುವುದನ್ನು ಕಾಯದೇ ಸಾರ್ವಜನಿಕರು ಸರ್ಕಾರದ ಬ್ಯಾಂಕ್, ಇತರ ಕಚೇರಿಗಳಿಗೆ ತೆರಳಿ ಸಮರ್ಪಕ ಮಾಹಿತಿ ಪಡೆದು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿ ಬ್ಯಾಂಕ್ ಅಧಿಕಾರಿಗಳ, ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡ್ರೋನ್ ಮೂಲಕ ರೈತರು ಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಿಸುವ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಮಾತನಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ನಂದೀಶ್, ನಿವೃತ್ತ ಸೈನಿಕ ಎಸ್.ಎನ್. ಪಾಂಡು ಉಪಸ್ಥಿತರಿದ್ದರು. ಉಮಾಶಂಕರಿ ಪ್ರಾರ್ಥಿಸಿ, ಜಯಮ್ಮ ಸ್ವಾಗತಿಸಿದರು. ಜಯಕುಮಾರ್ ವಂದಿಸಿದರು.

ಸಾರ್ವಜನಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವರ್ತಕರು, ಕೃಷಿಕರು ಹಾಜರಿದ್ದು, ಕಾರ್ಯಕ್ರಮದ ಬಗ್ಗೆ ಸವಿವರ ಮಾಹಿತಿ ಪಡೆದರು.