ಮಡಿಕೇರಿ, ಜ. ೬: ಕಳೆದ ೩೧ ವರ್ಷಗಳ ಹಿಂದೆ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ್ದ ಕರಸೇವಕನನ್ನು ಬಂಧಿಸಿರುವ ಪ್ರಕರಣವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಡಿಕೇರಿ ಪೊಲೀಸ್ ಉಪಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂಜಾವೇ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಈಗಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ೩೧ ವರ್ಷಗಳ ಹಿಂದಿನ ಕರಸೇವೆಯ ಪ್ರಕರಣವನ್ನು ಮತ್ತೆ ತೆರೆದು ಕರಸೇವಕನನ್ನು ಬಂಧಿಸಿರುವದು ಖಂಡನೀಯ. ಸರಕಾರ ಹಿಂದೂ ವಿರೋಧಿ ನೀತಿಯನ್ನು ನೇರವಾಗಿ ಮಾಡುತ್ತಿದೆ. ನಾವೆಲ್ಲರೂ ರಾಮ ಭಕ್ತರಾಗಿದ್ದು ಸಾಧ್ಯವಾದರೆ ಎಲ್ಲರನ್ನೂ ಬಂಧಿಸಲಿ ಎಂದು ಸವಾಲು ಹಾಕಿದರು. ಈಗಿನ ಸರಕಾರದ ಸಚಿವ ಸಂಪುಟದಲ್ಲಿ ಹಲವಾರು ಸಚಿವರ ಮೇಲೆ ಎಷ್ಟೊಂದು ಮೊಕದ್ದಮೆಗಳಿವೆ, ಅವರುಗಳನ್ನು ಬಂದಿಸಲಿ. ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುವ ಕಾರ್ಯ ಸರಕಾರದಿಂದ ಆಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಸಂದರ್ಭ ಪ್ರಾಣಹಾನಿ ಕೂಡ ಸಂಭವಿಸಿದೆ. ಈ ಪ್ರಕರಣದಲ್ಲೂ ಭಾಗಿಯಾಗಿರುವ ಹಿಂದೂಗಳ ಮೇಲೆ ಮೊಕದ್ದಮೆ ದಾಖಲಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸರಕಾರದ ನಿಲುವು ಅರ್ಥವಾಗುತ್ತಿದೆ. ಇಂತಹ ಕಾರ್ಯಗಳನ್ನು ಖಂಡಿಸುವದಾಗಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ; ಈಗಿನ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಹಿಂದೂಗಳ ಮೇಲಿನ ಧಮನಕಾರಿ ನೀತಿಯನ್ನು ಸಹಿಸಲಾಗುವದಿಲ್ಲ. ಮೊಕದ್ದಮೆ, ಜೈಲುವಾಸ ಎಲ್ಲವೂ ಅನುಭವಿಸಿದ್ದು, ಇನ್ನು ಮುಂದೆಯೂ ಅನುಭವಿಸಲು ಸಿದ್ಧರಿದ್ದೇವೆ. ಯಾವದೇ ಕಾರಣಕ್ಕೂ ಹಿಂದುತ್ವ ಬಿಡುವದಿಲ್ಲ, ರಾಮ ಭಕ್ತರಾಗಿದ್ದೇವೆ. ಬಂದಿಸುವದಾದರೆ ಈಗಲೇ ಬಂದಿಸಿ ಎಂದು ಸವಾಲೆಸೆದರು.

ಪ್ರತಿಭಟನೆಯಲ್ಲಿ ಸಹ ಸಂಚಾಲಕ ಚೇತನ್, ನಗರ ಸಂಚಾಲಕ ದುರ್ಗೇಶ್, ವಿನಯ್‌ಕುಮಾರ್, ಕುಮಾರ್ ಶ್ರೀನಿವಾಸ್ ರೈ, ಮೂಡ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ನಗರ ಚೇಂಬರ್ ಅಧ್ಯಕ್ಷ ಧನಂಜಯ, ಕವನ್ ಕಾವೇರಪ್ಪ, ಬಿ.ಕೆ.ಜಗದೀಶ್, ಕಾರ್ಯಕರ್ತರು, ನಗರ ಸಭಾ ಸದಸ್ಯರುಗಳು ಪಾಲ್ಗೊಂಡಿದ್ದರು. ಬಳಿಕ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರನ್ನು ಪೊಲೀಸ್ ಠಾಣೆಯ ಓಳಾವರಣಕ್ಕೆ ಬಿಡದೆ ಗೇಟ್‌ನಲ್ಲಿಯೇ ತಡೆ ಹಿಡಿಯಲಾಗಿತ್ತು.ಕುಶಾಲನಗರ, ಜ. ೬: ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ ಖಂಡಿಸಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕುಶಲನಗರ ಡಿ.ವೈ.ಎಸ್.ಪಿ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಉದ್ದೇಶಪೂರ್ವಕವಾಗಿ ಹಿಂದೂಗಳ ಮೇಲೆ ದಾಳಿ ಮಾಡುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಾವು ಕೂಡ ಕರಸೇವಕರು, ತಮ್ಮನ್ನು ಬಂಧಿಸಿ ಎಂದು ಘೋಷಣೆ ಕೂಗುವ ಮೂಲಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಕಾರ್ಯಕರ್ತರು ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾದ ಬೋಜೇಗೌಡ, ತಾಲೂಕು ಪ್ರಮುಖರಾದ ಹರೀಶ್, ವಿನೋದ್, ಉಮೇಶ್, ಜಿ.ಎಲ್. ನಾಗರಾಜ್ ಅಮೃತರಾಜ್, ನವನೀತ್, ಭರತ್ ಮಾಚಯ್ಯ, ದರ್ಶನ್ ಜೋಯಪ್ಪ, ಎಂ.ಡಿ. ಕೃಷ್ಣಪ್ಪ, ಕೆ.ಜಿ. ಮನು ಚಂದ್ರಶೇಖರ್ ಹೇರೂರು, ಉಮಾಶಂಕರ್, ವೈಶಾಕ್, ಪ್ರದೀಪ್ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಪ್ರಮುಖರು ಇದ್ದರು.ವೀರಾಜಪೇಟೆ, ಜ. ೬: ಹಿಂದೂ ಜಾಗರಣ ವೇದಿಕೆ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ವೀರಾಜಪೇಟೆ ಪೊಲೀಸ್ ಉಪ ವಿಭಾಗ ಉಪ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ಹಿಂದೂ ಪರ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಯುವ ಘಟಕದ ಪ್ರಮುಖ ಸುನೀಲ್ ಮಾದಪುರ, ರಾಜ್ಯದಲ್ಲಿ ಕೋಮು ಗಲಭೆಯನ್ನು ಮತ್ತೊಮ್ಮೆ ಸೃಷ್ಟಿ ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಹೀಗೆ ಮಾಡಿದೆ. ರಾಷ್ಟçವೇ ಪ್ರಸ್ತುತ ರಾಮಮಂದಿರ ಉದ್ಘಾಟನೆ ಹೊಸ್ತಿಲಲ್ಲಿ. ಇಂತಹ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧನ ಮಾಡಿ ಹಿಂದೂ ಸಮಾಜಕ್ಕೆ ಕಳಂಕ ತರುವಂತೆ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ನಂತರ ಮನವಿ ಪತ್ರವನ್ನು ಡಿವೈಎಸ್ಪಿ ಮೋಹನ್ ಕುಮಾರ್ ಅವರಿಗೆ ನೀಡಲಾಯಿತು. ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಿಂದೂ ಜಾಗರಣ ವೇದಿಕೆ ವೀರಾಜಪೇಟೆ ತಾಲೂಕು ಘಟಕದ ಸಂಚಾಲಕ ಗಣೇಶ್ ಬಿಟ್ಟಂಗಾಲ, ಜಿಲ್ಲಾ ಸಂಪರ್ಕ ಪ್ರಮುಖ್ ಟೋಳಿ, ರವಿ ಅಮ್ಮತ್ತಿ, ಸಹ ಸಂಯೋಜಕ ವಿನಾಯಕ ಅಮ್ಮತ್ತಿ, ಪ್ರಮುಖರಾದ ರದೀಶ್, ಮೋಹನ್ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಜರಿದ್ದರು.