ಮೈಸೂರು, ಜ. ೪: ಜಿಲ್ಲೆಯ ಮೂಲದ ವೀರ ಸೇನಾನಿ ನಿವೃತ್ತ ಮೇಜರ್ ಜನರಲ್ ಕೋದಂಡ ಕೆ. ಕರುಂಬಯ್ಯ ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ೭.೪೫ರಲ್ಲಿ ಮೈಸೂರು ಹೊರವಲಯದ ಹೆಮ್ಮನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
೧೯೩೬ರ ಡಿಸೆಂಬರ್ ೩ರಂದು ಮಡಿಕೇರಿಯಲ್ಲಿ ಡಾ. ಸಿ.ಬಿ. ಕಾರ್ಯಪ್ಪ ಅವರ ಪುತ್ರರಾಗಿ ಜನಿಸಿದ ಅವರು, ಮಡಿಕೇರಿಯ ಸೆಂಟ್ರಲ್ ಪ್ರೌಢಶಾಲೆ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ವೆಲ್ಲಿಂಗ್ಟನ್ನ ರಕ್ಷಣಾ ಸೇವೆಗಳ ಸ್ಟಾಫ್ ಕಾಲೇಜಿನಲ್ಲಿ ಪದವಿ ಪಡೆದರು. ೧೯೫೭ರಲ್ಲಿ ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರಿದರು. ಮರಾಠ ಲಘು ಪದಾತಿದಳದ ೫ನೇ ಬೆಟಾಲಿಯನ್ಗೆ ನೇಮಕಗೊಂಡ ಅವರು ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾದ ಸೇನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ರಾಜಸ್ಥಾನ ಗಡಿಯಲ್ಲಿ ಸೇನೆಯನ್ನು ಮುನ್ನಡೆಸಿ ಪಾಕಿಸ್ತಾನದ ಹಲವು ಗ್ರಾಮಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು.
ಇದಲ್ಲದೆ ೧೯೭೧ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಕೂಡ ಭಾಗವಹಿಸಿದ್ದ ಇವರು ಆ ಯುದ್ಧದಲ್ಲಿ ಭಾರತೀಯ ಯೋಧರು
(ಮೊದಲ ಪುಟದಿಂದ) ತೋರಿದ ವೀರಾವೇಶಕ್ಕೆ ೯೧ ಸಾವಿರ ಪಾಕ್ ಯೋಧರು ಶರಣಾಗತರಾಗಿದ್ದರು. ಅಲ್ಲದೇ ೧೯೭೧ ರಲ್ಲಿ ಬಾಂಗ್ಲಾದೇಶದ ಮಗುರಾದಲ್ಲಿ ಶಸ್ತಾçಸ್ತç ಸಾಗಿಸುತ್ತಿದ್ದ ಪಾಕಿಸ್ತಾನದ ೩೦೦ ಟ್ರಕ್ಗಳನ್ನು ವಶಕ್ಕೆ ಪಡೆಯುವಲ್ಲಿಯೂ ಇವರ ಪಾತ್ರ ದೊಡ್ಡದಾಗಿತ್ತು. ಅವರು ಮುನ್ನಡೆಸಿದ್ದ ಪಡೆಗೆ ರಾಷ್ಟçಪತಿಗಳಿಂದ ಗೌರವ ದೊರೆತಿತ್ತು. ಕರುಂಬಯ್ಯ ಅವರ ಶೌರ್ಯಕ್ಕೆ ಸೇನಾ ಪದಕವನ್ನೂ ನೀಡಿ ಗೌರವಿಸಲಾಗಿತ್ತು.
ಇವರು ೧೯೭೨ರಲ್ಲಿ ಉತ್ತರ ಪ್ರದೇಶದ ಜಹಾಂಗೀರಾಬಾದ್ ದಂಗೆಯನ್ನು ಹತ್ತಿಕ್ಕುವಲ್ಲಿ ಮತ್ತು ಸಿಕ್ಕಿಂನ ನಾಥೂ ಲಾ ಪಾಸ್ನಲ್ಲಿ ಇವರ ನೇತೃತ್ವದ ಸೇನಾ ಬೆಟಾಲಿಯನ್ಗೆ ಬ್ಲಾö್ಯಕ್ ಕ್ಯಾಟ್ ಟ್ರೋಫಿ ಸಿಕ್ಕಿತ್ತು. ಇವರು ಬೆಳಗಾವಿ ಹಾಗೂ ಹಿಮಾಚಲ ಪ್ರದೇಶದ ಯೋಲ್ ಸೇನಾ ಶಾಲೆಗಳ ಸ್ಟೇಷನ್ ಕಮಾಂಡರ್ ಹಾಗೂ ಕಂಟೋನ್ಮೆAಟ್ ಬೋರ್ಡ್ ಅಧ್ಯಕ್ಷರಾಗಿದ್ದರು. ಲಡಾಖ್ನಲ್ಲಿ ೧೨೧ ಇನ್ಫ್ಯಾನ್ಟç ಬ್ರಿಗೇಡ್ ಗ್ರೂಪ್ ಮುನ್ನಡೆಸಿದ್ದ ಕರುಂಬಯ್ಯ, ಹೆಚ್ಚುವರಿ ಮಿಲಿಟರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ೩೫ ವರ್ಷ ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ೧೯೯೧ರ ಡಿಸೆಂಬರ್ ೩೧ರಂದು ನಿವೃತ್ತರಾಗಿದ್ದರು.
ನಿವೃತ್ತಿ ನಂತರ ಕೆ.ಹೆಮ್ಮನಹಳ್ಳಿ ತೋಟದ ಮನೆಯಲ್ಲಿ ಕಳೆದ ೩೦ ವರ್ಷದಿಂದ ಕೃಷಿಕರಾಗಿ ನೆಲೆಸಿದ್ದರು. ಮೈಸೂರು ನಗರದ ನಾಗರಿಕ, ಜನಪರ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಅವರು ಮೈಸೂರು ಗ್ರಾಹಕ ಪರಿಷತ್ತಿನ ಸದಸ್ಯರೂ, ಮೈಸೂರು ಸ್ಪೋರ್ಟ್ಸ್ ಕ್ಲಬ್, ಹಿರಿಯ ನಾಗರಿಕರ ವೇದಿಕೆಯ ಸದಸ್ಯರೂ ಆಗಿದ್ದರು. ಹಲವು ನಾಗರಿಕ ಹೋರಾಟಗಳಲ್ಲೂ ಇವರು ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ತಾ. ೫ರಂದು (ಇಂದು) ಮಧ್ಯಾಹ್ನ ವಿಜಯನಗರದ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. -ಕೋವರ್ ಕೊಲ್ಲಿ ಇಂದ್ರೇಶ್