ಸಿದ್ದಾಪುರ, ಜ. ೪: ಹೊರ ರಾಜ್ಯಗಳ ವಾಹನಗಳನ್ನು ಖರೀದಿಸಿ ಅದರ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದ ನೆಲ್ಲಿಹುದಿಕೇರಿ ಗ್ರಾ.ಪಂ ಸದಸ್ಯ ಸೇರಿ ಐವರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳ ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಾಹನಗಳನ್ನು ಖರೀದಿಸಿ ಅದರ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸಿ, ಕರ್ನಾಟಕ ರಾಜ್ಯದ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿ ನೆಲ್ಲಿಹುದಿಕೇರಿ ಗ್ರಾ.ಪಂ ಸದಸ್ಯ ನಲ್ವತ್ತೇಕರೆ ನಿವಾಸಿ ಶಂಶೀರ್(೩೧), ನಲ್ವತ್ತೇಕರೆ ನಿವಾಸಿಗಳಾದ ಮಜೀದ್, ಸಲಾಂ, ಶಾಜಿ ಹಾಗೂ ಮುಸ್ತಫಾ ಎಂಬವರುಗಳನ್ನು ಬಂಧಿಸಿ ದ್ದಾರೆ. ಆರೋಪಿಗಳಿಂದ ನಂಬರ್ ಪ್ಲೇಟ್ ಬದ ಲಾಯಿಸಿದ ಮೂರು ಟವೇರಾ ವಾಹನಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ವಂಚನೆ ಆರೋಪದಡಿ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿಗಳಾದ ಉತ್ತಯ್ಯ, ಮೋಹನ್, ಶ್ರೀನಿವಾಸ್, ಸಿಬ್ಬಂದಿಗಳಾದ ರತನ್, ಪ್ರಭ ಇತರರು ಪಾಲ್ಗೊಂಡಿದ್ದರು.