ಸಿದ್ದಾಪುರ, ಜ. ೩: ಫ್ರೆಂಡ್ಸ್ ಇಲೆವನ್ ವತಿಯಿಂದ ಮೂರನೇ ವರ್ಷದ ಮಾಲ್ದಾರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಬಾಡಗದ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಾಲ್ದಾರೆ ಸರಕಾರಿ ಶಾಲೆ ಮೈದಾನದಲ್ಲಿ ೨ ದಿನಗಳ ಕಾಲ ನಡೆದ ಅಂತಿಮ ಪಂದ್ಯದಲ್ಲಿ ರೆಡ್ ಅಲರ್ಟ್ ತಂಡವನ್ನು ಮಣಿಸಿದ ರಿಯಾಜ್ ನಾಯಕತ್ವದ ಲೆಜೆಂಡ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಮಾಜ ಸೇವಕ ಮುನ್ನ ಬಶೀರ್, ಮಾಲ್ದಾರೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೈದಾನ ಇಲ್ಲದೆ ಯುವ ಪ್ರತಿಭೆಗಳು ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ ಕ್ರೀಡಾಕೂಟಗಳಿಗೆ ಸಾರ್ವಜನಿಕ ಮೈದಾನದ ಅಗತ್ಯವಿದ್ದು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ ಎಂದರು. ಲೀಗ್ ಮಾದರಿಯ ಪಂದ್ಯಾಟದಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದವು ಫೈನಲ್ ಪಂದ್ಯ ಪುರುಷೋತ್ತಮ ಲೆಜೆಂಡ್ಸ್ ತಂಡದ ರಿಯಾಜ್, ಸರಣಿ ಶ್ರೇಷ್ಠ ರೆಡ್ ಅಲರ್ಟ್ ತಂಡದ ಶ್ರೀಜಿತ್, ಉತ್ತಮ ಹೊಡೆತಗಾರ ರಿಯಾಜ್, ಉತ್ತಮ ಎಸೆತಗಾರ ಸಪ್ತಾ ಪಡೆದರು. ಈ ಸಂದರ್ಭ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್, ಸದಸ್ಯರಾದ ಇಸ್ಮಾಯಿಲ್, ನಿಯಾಸ್, ಪ್ರಮುಖರಾದ ಪವರ್ಗಿಸ್, ಮಣಿ, ಶಾಜಿ, ಪ್ರವೀಣ್, ಮಂಜು, ರಾಸನ್, ದರ್ಶನ್, ಫ್ರೆಂಡ್ಸ್ ಇಲವೆನ್ನ ಅಧ್ಯಕ್ಷ ರಶೀದ್ ಸೇರಿದಂತೆ ಮತ್ತಿತರರು ಹಾಜರಿದ್ದರು.