ಕುಶಾಲನಗರ, ಜ. ೩: ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ೨೯ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿ ಯಿಂದ ನೆರವೇರಿತು.

ಪೂಜೋತ್ಸವ ಅಂಗವಾಗಿ ದೇವಾಲಯವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯ ಆವರಣದಲ್ಲಿ ಆಕರ್ಷಕ ರಂಗೋಲಿ ರಚಿಸಿ ದೀಪಗಳನ್ನು ಹಚ್ಚಿ ವಿಶೇಷ ಮೆರುಗು ಕಲ್ಪಿಸಲಾಗಿತ್ತು.

ಬೆಳಗ್ಗಿನಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು. ಸಂಜೆ ಉತ್ಸವ ಮೂರ್ತಿಯ ಮೆರವಣಿಗೆ, ಕಾವೇರಿ ನದಿಯಲ್ಲಿ ತೀರ್ಥಸ್ನಾನ ನಂತರ ಪಂಪಾದೀಪವನ್ನು ನದಿಯಲ್ಲಿ ತೇಲಿ ಬಿಡಲಾಯಿತು. ಬಳಿಕ ದೇವಾಲಯದಲ್ಲಿ ಪಡಿಪೂಜೆ ಮಹಾಮಂಗಳಾರತಿಯೊAದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ತೋತ್ರಗಳನ್ನು ಪಠಿಸಿ ಭಜನೆ ನಡೆಸಿದರು. ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ದೇವಾಲಯದ ಆವರಣ ದಲ್ಲಿ ಭಕ್ತರು ದೀಪಗಳನ್ನು ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಪುರಸಭೆ ಸದಸ್ಯ ಹಾಗೂ ಸಮಿತಿ ಪ್ರಮುಖರಾದ ವಿ.ಎಸ್. ಆನಂದಕುಮಾರ್, ಗೆಳೆಯರ ಬಳಗದ ಎಚ್.ಎಂ. ಚಂದ್ರು, ಡಿ.ವಿ. ರಾಜೇಶ್, ರಾಕಿ, ಎಚ್.ಟಿ. ವಸಂತ್, ಗಿರೀಶ್, ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಗಣಪತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.