ಕೂಡಿಗೆ, ಡಿ. ೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣದಿಂದಾಗಿ ಅಕಾಲಿಕ ಮಳೆ ಆರಂಭಗೊAಡಿದೆ.

ಈಗಾಗಲೇ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ ಬೆಳೆಸಲಾದ ವಿವಿಧ ಹೈಬ್ರೀಡ್ ತಳಿಯ ಭತ್ತದ ಬೆಳೆಯನ್ನು ಕಟಾವು ಮಾಡಿ ಗದ್ದೆಗಳಿಂದ ತಮ್ಮ ಮನೆಯ ಹತ್ತಿರದ ಕಣಗಳಿಗೆ ಹಾಕಿದ್ದಾರೆ. ಆದರೆ ಭತ್ತದ ಹುಲ್ಲನ್ನು ಒಕ್ಕಲು ಮಾಡದೆ ಕಣದಲ್ಲಿ ಬಿಡಲಾಗಿತ್ತು. ಇದೀಗ ಅಕಾಲಿಕ ಮಳೆಯಿಂದಾಗಿ ಕಣದಲ್ಲಿದ್ದ ಹುಲ್ಲು ಮಳೆಗೆ ಆಹುತಿಯಾಗುತ್ತಿದೆ.

ಹುಲ್ಲಿಗೆ ಭಾರೀ ಬೇಡಿಕೆ ಇರುವುದರಿಂದಾಗಿ ಅನೇಕ ರೈತರು ತಮ್ಮ ತಮ್ಮ ಕಣಗಳಲ್ಲಿ ಮಳೆಯಿಂದಾಗಿ ಹುಲ್ಲಿನ ರಕ್ಷಣೆಗೆ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸುವಂತಾಗಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಬ್ಬಾಲೆ, ಹುದುಗೂರು ಶಿರಂಗಾಲ, ತೊರೆನೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹೈನುಗಾರಿಕೆಯಲ್ಲಿ ಈ ಭಾಗದ ರೈತರು ತೊಡಗಿರುವ ಹಿನ್ನೆಲೆಯಲ್ಲಿ ಹುಲ್ಲಿನ ಅವಶ್ಯಕತೆ ಬಹು ಮುಖ್ಯವಾಗಿರುತ್ತದೆ. ಭಾರೀ ನಷ್ಟ ಉಂಟಾಗುವ ಸಂಭವ ಹೆಚ್ಚಾಗಿದೆ ಎಂದು ಈ ವ್ಯಾಪ್ತಿಯ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.