ವರದಿ: ಈಶಾನ್ವಿ ಕಿರಣ್

ವೀರಾಜಪೇಟೆ, ಜ. ೪: ಜನವರಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೊಡಗಿನ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲು ಸಮಯದಲ್ಲಿ ಮಳೆ ಸುರಿದಿರುವುದರಿಂದ ಭತ್ತದ ಕೃಷಿಕರು ಹಾಗೂ ಕಾಫಿ ಬೆಳೆಗಾರರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ವರ್ಷದ ಫಸಲು ಕೈಸೇರುವ ಬದಲು ನೆಲಕಚ್ಚುವಂತಾ ಗಿರುವುದು ರೈತಾಪಿ ವರ್ಗ ಕಣ್ಣೀರಿನಲ್ಲಿ ದಿನ ಕಳೆಯುವಂತೆ ಮಾಡಿದೆ.

ಚಂಡಮಾರುತ ಹಿನ್ನೆಲೆಯಲ್ಲಿ ಫಸಲು ಕೊಯ್ಲು ಸಂದರ್ಭದಲ್ಲಿ ಮಳೆ ಸುರಿದು ಹಾನಿವುಂಟು ಮಾಡಿದೆ. ಡಿಸೆಂಬರ್, ಜನವರಿ ತಿಂಗಳಲ್ಲಿ ಭತ್ತದ ಕೊಯ್ಲು ಹಾಗೂ ಅರೆಬಿಕಾ, ರೋಬಸ್ಟಾ ಕಾಫಿ ಕೊಯ್ಲು ನಡೆಯುತ್ತದೆ. ಈ ವೇಳೆ ಕೃಷಿಕರು ಮಳೆ ಬಾರದಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ.

ಗದ್ದೆಯಲ್ಲಿ ಕೊಯ್ಲು ಮಾಡಿದ್ದ ಭತ್ತ ನೀರಿನಲ್ಲಿ ನೆನೆದು ಹಾಳಾಗಿದೆ. ಹಣ್ಣಾಗಿರುವ ಭತ್ತ ಉದುರಿ ನೆಲಸೇರುತ್ತಿದೆ. ಭತ್ತ ಲಾಭದಾಯಕ ಕೃಷಿಯಲ್ಲ ಎಂಬ ಕಾರಣಕ್ಕಾಗಿ ಸಾಕಷ್ಟು ರೈತರು ಭತ್ತ ಬೆಳೆಯುವುದನ್ನು ಬಿಟ್ಟಿದ್ದಾರೆ. ಭತ್ತದ ಗದ್ದೆ ಅನ್ಯ ಉದ್ದೇಶಕ್ಕೆ ಬಳಸಬಾರದೆಂದು ಹಠತೊಟ್ಟು ಕೃಷಿ ಮಾಡುತ್ತಿರುವ ರೈತಾಪಿ ವರ್ಗ ಅಕಾಲಿಕ ಮಳೆಯ ಹೊಡೆತಕ್ಕೆ ಸಿಲುಕಿದ್ದಾರೆ.

ಹಣ್ಣಾಗಿರುವ ರೋಬಸ್ಟಾ ಕೊಯ್ಲು ಮಾಡುತ್ತಿರುವ ಸಂದರ್ಭದಲ್ಲಿಯೇ ಮಳೆಯಾಗಿರುವುದು ಬೆಳೆಗಾರರಿಗೆ ಆರ್ಥಿಕ ಪೆಟ್ಟು ಕೊಟ್ಟಿದೆ. ಮತ್ತೆ ಮಳೆ ಸುರಿದಲ್ಲಿ ಮತ್ತಷ್ಟು ಕಷ್ಟನಷ್ಟಕ್ಕೆ ಸಿಲುಕಿ ಕಾಫಿ ಬೆಳೆಗಾರರು ತತ್ತರಿಸಿ ಹೋಗಲಿದ್ದಾರೆ. ವರ್ಷಪೂರ್ತಿ ಸುರಿಯುವ ಮಳೆಯಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿ ಮತ್ತೆ ರೈತನ ಪಾಲಿಗೆ ಸಂಕಷ್ಟ ತಂದೊಡ್ಡಿದೆ.

ನೀರು ಹಾಯಿಸಿರುವ ತೋಟಗಳಲ್ಲಿ ಕಾಫಿ ಉದುರಿದೆ. ಒಂದಷ್ಟು ಮೊಗ್ಗುಗಳು ಅರಳುವ ಹಂತಕ್ಕೆ ಬಂದಿದೆ. ಇದೆಲ್ಲವೂ ನಷ್ಟ. ಒಂದು ತಿಂಗಳಲ್ಲಿ ಕಾಫಿ ಕೊಯ್ಲು ಮುಗಿಯಬೇಕು. ಆದರೆ, ಮತ್ತೆ ಮಳೆ ಬಂದರೆ ಎಲ್ಲವೂ ಕಳೆದುಕೊಳ್ಳುತ್ತೇವೆ ಎಂಬ ಭಯವಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು.

ಬೆಳೆಗಾರರನ್ನು ಪ್ರಕೃತಿಯೇ ಕಾಪಾಡಬೇಕು. ಪ್ರತಿವರ್ಷ ಒಂದಲ್ಲ ಒಂದು ಕಾರಣಕ್ಕಾಗಿ ರೈತರು, ಬೆಳೆಗಾರರೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.