ಮಡಿಕೇರಿ, ಜ. ೨: ವಿದ್ಯಾರ್ಥಿನಿಯ ಶ್ರಮ, ಸದ್ಚಿಂತನೆ ಯಿಂದಾಗಿ ಕಲುಷಿತವಾಗುತ್ತಿದ್ದ ಹಾಗೂ ಮೋಜು ಮಸ್ತಿಯ ತಾಣವಾಗುತ್ತಿದ್ದ ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಗೆ ಇದೀಗ ರಕ್ಷಣೆ ದೊರೆತಂತಾಗಿದೆ ಹಾಗೂ ಸ್ವಚ್ಛ ಹೊಳೆಯ ಪ್ರಾಮುಖ್ಯತೆಯ ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ೩೧ನೇ ರಾಷ್ಟಿçÃಯ ವಿಜ್ಞಾನ ಸಮಾವೇಶದಲ್ಲಿ ಬಾಲ ವಿಜ್ಞಾನಿ ಪ್ರಶಸ್ತಿಗೆ ಭಾಜನರಾದ ಸುಂಟಿಕೊಪ್ಪ ನಾಡ ಪ್ರೌಢಶಾಲೆಯ ಕೊಡಗರಹಳ್ಳಿಯ ೮ನೇ ತರಗತಿ ವಿದ್ಯಾರ್ಥಿನಿ ಶ್ರೀಶಾ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ವಿಜ್ಞಾನ ಸಮಾವೇಶಕ್ಕೆ ‘ಕಲುಷಿತಗೊಳ್ಳುತ್ತಿರುವ ನದಿಯ ದಡ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಬೇಕಿದ್ದ ಶ್ರೀಶಾ, ಈ ವಿಷಯದ ಕುರಿತು ಅಧ್ಯಯನ ನಡೆಸಲು ಪ್ರವಾಸಿ ತಾಣವಾಗಿರುವ ಹರದೂರು ಹೊಳೆಗೆ ತೆರಳಿದ್ದರು. ಈ ಸಂದರ್ಭ ಹೊಳೆಯ ತೀರ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳಿಂದ ಹಾಗೂ ಬಟ್ಟೆ ಒಗೆಯುವುದರಿಂದಾಗಿ ಕಲುಷಿತ ಗೊಳ್ಳುತ್ತಿದ್ದುದ್ದನ್ನು ಶ್ರೀಶಾ ಗಮನಿಸಿದ್ದಳು. ಈ ಸಂದರ್ಭ ಅಲ್ಲೇ ಇದ್ದ ಕೆಲ ಸ್ಥಳೀಯರನ್ನು ಮಾತನಾಡಿಸಿ ಅವರಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೆ ಅವರಿಂದ ಹೊಳೆಯ ಸ್ಥತಿಗತಿಯ ಬಗ್ಗೆ ಅರಿತುಕೊಂಡಿದ್ದಾಳೆ. ಅಲ್ಲಿದ್ದ ಕೆಲ ಸ್ಥಳೀಯರು ಹೊಳೆಯ ಅಶುಚಿತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಹೊಳೆಯಿಂದಲೇ ಗ್ರಾಮಕ್ಕೆ ಕುಡಿಯುವ ನೀರನ್ನೂ ಸರಬರಾಜು ಮಾಡಲಾಗುತ್ತದೆ. ಆದರೆ ಇಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ತ್ಯಾಜ್ಯ, ಮದ್ಯದ ಬಾಟಲಿಗಳು ಅಲ್ಲಲ್ಲಿ ಕಾಣಸಿಗುತ್ತಿರುವುದಾಗಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದನ್ನು ತನ್ನ ತಂದೆಯ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆ ಹಿಡಿದ ಶ್ರೀಶಾ, ಈ ವಿಡಿಯೋವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಹರದೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿ ಮಾಡಿ ತೋರಿಸಿದ್ದಲ್ಲದೆ ಹೊಳೆಯಲ್ಲಿನ ಮಾಲಿನ್ಯ ತಡೆಗಟ್ಟಲು ಮನವಿ ಮೂಲಕ ಪ್ರಯತ್ನಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿ ಸುಂಟಿಕೊಪ್ಪ ಠಾಣಾಧಿಕಾರಿಗೆ ಸೂಚನೆ ನೀಡಿ ಹೊಳೆಯ ಬದಿ ಪೊಲೀಸ್ ಗಸ್ತನ್ನು ನೇಮಕ ಮಾಡಿ ಮಾಲಿನ್ಯ ನಿಯಂತ್ರಣಕ್ಕೆ ಹೊಳೆ ಸಮೀಪ ಸಿ.ಸಿ ಕ್ಯಾಮರಾ ಅಳವಡಿಸುವಂತೆ ಪಂಚಾಯಿತಿ ಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ.
ಹರದೂರು ಸ.ಮಾ.ಪ್ರಾ ಶಾಲಾ ಮಕ್ಕಳನ್ನು ಸೇರಿಸಿ ‘ಹರದೂರು ಹೊಳೆಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ವಾಕ್ಯದೊಂದಿಗೆ ಜಾಗೃತಿ ಜಾಥಾ ನಡೆಸಿದ ಶ್ರೀಶಾ ಹೊಳೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ ವಿಜ್ಞಾನ ಸಮಾವೇಶದಲ್ಲಿ ಪ್ರಶಸ್ತಿ ಮಾತ್ರ ಗಳಿಸಿದ್ದಲ್ಲದೆ, ಪ್ರಾಯೋಗಿಕ ಸಮಸ್ಯೆಯನ್ನು ಬಗೆಹರಿಸಲು ಹಜ್ಜೆ ಇಟ್ಟ ವಿದ್ಯಾರ್ಥಿನಿಯ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.