ಮುಳ್ಳೂರು ಜ. ೧: ಸಮೀಪದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ೨೦೨೩ನೇ ಸಾಲಿನ ವರ್ಷಾಂತ್ಯದ ವಿಶೇಷ ಮಾಸಿಕ ಸಭೆ ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಗಯ್ಯನಪುರದಲ್ಲಿರುವ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರಿ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಸಿಕ ಸಭೆಯಲ್ಲಿ ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್ ೨೦೨೩ನೇ ಸಾಲಿನ ವರದಿ ಮಂಡಿಸಿದರು. ಅರೆಭಾಷೆ ಗೌಡ ಸಮಾಜದ ವತಿಯಿಂದ ೨೦೨೩ರ ಸಾಲಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳು, ಸಮಾಜದ ಪ್ರಗತಿಗೆ ಕುರಿತಾದ ಮುಂದಿನ ಯೋಜನೆಗಳ ಚರ್ಚಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ಸಮಾಜದ ಹಿರಿಯ ಕೀಜನ ನಾಣಯ್ಯ ಉದ್ಘಾಟಿಸಿದರು. ಅರೆಭಾಷೆ ಗೌಡ ಸಮಾಜದ ಗೌರವಾಧ್ಯಕ್ಷ ಭಟ್ಯನ ಈರಪ್ಪ ಮಾತನಾಡಿ, ಅರೆಭಾಷೆ ಸಮಾಜದ ಬಾಂಧವರು ಒಟ್ಟಾಗಿ ಒಂದುಗೂಡುವ ಮನೋಭಾವನೆ ಬೆಳೆಸಿಕೊಂಡರೆ ಸಮಾಜವು ಬೆಳವಣಿಗೆಯಾಗುತ್ತದೆ ಎಂದರು.
ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಸಮಾಜ ಬಾಂಧವರ ಪ್ರೋತ್ಸಾಹ, ಸಲಹೆ, ಸಹಕಾರ ಪ್ರಮುಖ ಪಾತ್ರವಹಿಸುತ್ತದೆ. ಸಮಾಜದ ವತಿಯಿಂದ ಮುಂದಿನ ದಿನಗಳಲ್ಲಿ ದಂತ ತಪಾಸಣಾ ಶಿಬಿರ ಸೇರಿದಂತೆ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅರೆಭಾಷೆ ಗೌಡ ಜನಾಂಗದ ಸಾಧಕರಾದ ವಿದ್ಯುತ್ ಇಲಾಖೆ ಅಭಿಯಂತರ ಪಡ್ಡಂಬೈಲು ರಮೇಶ್, ಪ್ರಗತಿಪರ ಕೃಷಿಕ, ಸಮಾಜ ಸೇವಕ ಮತ್ತು ಅರೆಭಾಷೆ ಗೌಡ ಸಮಾಜದ ಖಜಾಂಜಿ ಅಜಂಗಳ ರಾಮಣ್ಣ ಇವರುಗಳನ್ನು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಕೀಜನ ನಾಣಯ್ಯ, ಪರ್ಲಕೋಟಿ ಶೈಲಾ ಸತೀಶ್, ಸನ್ಮಾನಿತರಾದ ಪಟ್ಟಡ ಲೀಲಾಕುಮಾರ್ ಮುಂತಾದವರಿದ್ದರು.