ಸೋಮವಾರಪೇಟೆ, ಜ. ೧: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಆರೋಗ್ಯದತ್ತಲೂ ಗಮನ ಹರಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಮತ್ತು ಶಿಕ್ಷಕರು ನಿಗಾ ವಹಿಸಬೇಕು. ಆರೋಗ್ಯವನ್ನೂ ಸರಿಯಾಗಿ ಇಟ್ಟುಕೊಂಡಲ್ಲಿ ಮಾತ್ರ ಉತ್ಸಾಹಭರಿತ ಜೀವನ ನಡೆಸಲು ಸಾಧ್ಯ ಎಂದು ಮಾಜೀ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಓದಲು ಯಾರಿಗೂ ಹಿಂಜರಿಕೆ ಬೇಡ. ದೇಶದ ಹಲವು ಸಾಧಕರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರೇ ಆಗಿದ್ದಾರೆ ಎಂದರು.
ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು, ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಪೋಷಕರು ಮಾಡಬೇಕಿದೆ ಎಂದು ಅಭಿಪ್ರಾಯಿಸಿದರು.
ತಮ್ಮ ಮಕ್ಕಳಲ್ಲಿ ನಮ್ಮ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಬೆಳೆಸುವ ಕೆಲಸವನ್ನು ಪೋಷಕರು ಮಾಡಬೇಕು. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಿಕ್ಷಕರು ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ಕಾಣುವ ಮೂಲಕ ಉತ್ತಮ ಶಿಕ್ಷಣ ನೀಡಬೇಕೆಂದರು.
ಶಾಲಾ ಹಳೆಯ ವಿದ್ಯಾರ್ಥಿ, ನಿವೃತ್ತ ಪ್ರಾಂಶುಪಾಲರಾದ ಧರ್ಮಪ್ಪ ಮಾತನಾಡಿ, ಪೋಷಕರು ಮಕ್ಕಳಿಗೆ ಮೊದಲ ಶಿಕ್ಷಕರಾಗಿ ಉನ್ನತ ಶಿಕ್ಷಣ ಪಡೆಯುವ ಮಾರ್ಗಕ್ಕೆ ಅಡಿಗಲ್ಲಾಗಬೇಕು. ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ವಹಿಸಿದ್ದರು. ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಉದ್ಯಮಿ ಅರುಣ್ ಕಾಳಪ್ಪ, ದಾನಿಗಳಾದ ಮಧುಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಯಶೋಧ, ನಿವೃತ್ತ ಶಾಲಾ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ, ಪೋಷಕ ಸಮಿತಿ ಅಧ್ಯಕ್ಷೆ ಆಶಾ ಚೇತನ್ ಮತ್ತಿತರರು ಇದ್ದರು. ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.