ಗೋಣಿಕೊಪ್ಪಲು, ಜ. ೧: ಅನೇಕ ವರ್ಷಗಳಿಂದ ದುಸ್ಥಿತಿಯಲ್ಲಿದ್ದ ಮಡಿಕೇರಿ ತಾಲೂಕಿನ ಮೂರ್ನಾಡು-ಬಲಮುರಿ-ಪಾರಾಣೆ ರಸ್ತೆಗೆ ಕಾಯಕಲ್ಪ ದೊರೆಕಿದೆ. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ರೂ. ೪೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.

ರಸ್ತೆ ಕಾಮಗಾರಿ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಎ.ಎಸ್. ಪೊನ್ನಣ್ಣ ಅವಧಿಗೂ ಮುನ್ನವೇ ಕಾಮಗಾರಿ ಪೂರೈಸಿರುವುದಕ್ಕೆ ಶ್ಲಾಘಿಸಿದರು. ಕ್ಷೇತ್ರದಲ್ಲಿ ರಸ್ತೆ ಕಾಮಗಾರಿ, ವಿದ್ಯುತ್ ಸೇವೆ, ಸೇತುವೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನದಲ್ಲಿ ಅನುದಾನ ಲಭ್ಯವಾಗಲಿದೆ. ಇದೀಗ ಹೆಚ್ಚಿನ ಅನುದಾನವು ಕಾಂಗ್ರೆಸ್ ಪಕ್ಷದ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆಗೆ ಸದ್ಭಳಕೆ ಮಾಡಿರುವುದರಿಂದ ಅನುದಾನ ಮಂಜೂರಾತಿಯಲ್ಲಿ ವಿಳಂಬವಾಗುತ್ತಿದೆ. ಮುಂದಿನ ದಿನದಲ್ಲಿ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕರಿಸುವಂತೆ ಈ ಸಂದರ್ಭ ಮನವಿ ಮಾಡಿದರು.

ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬೊಳ್ಳಂಡ ಗಿರೀಶ್ ಮಾತನಾಡಿ, ಹಲವು ವರ್ಷಗಳಿಂದ ಪ್ರಮುಖ ರಸ್ತೆ ದುರಸ್ತಿಯಲ್ಲಿದ್ದ ಹಿನ್ನೆಲೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಗ್ರಾಮಸ್ಥರು ಗಮನ ಸೆಳೆದಿದ್ದರು. ಈ ವೇಳೆ ರಸ್ತೆ ದುರಸ್ತಿಪಡಿಸುವುದಾಗಿ ಭರವಸೆ ನೀಡಿದ್ದರು. ಇದೀಗ ನೀಡಿದ ಮಾತಿನಂತೆ ರೂ. ೪೫ ಲಕ್ಷ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ನಡೆಸಿಕೊಟ್ಟಿದ್ದಾರೆ. ಗುತ್ತಿಗೆದಾರರು ಅವಧಿಗೂ ಮುನ್ನ ಕಾಮಗಾರಿ ಪೂರೈಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

ರಸ್ತೆ ಉದ್ಘಾಟನೆ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಲ್ಯಾಟಂಡ ಕೌಶಿಕ್ ಕುಟ್ಟಯ್ಯ, ನಾಯಕಂಡ ಮುತ್ತಪ್ಪ, ಗ್ರಾಮಸ್ಥರಾದ ಬಿ.ಪದ್ಮಗಣಪತಿ, ಬೊಳ್ಳಂಡ ದಿಲಿ, ಬೆಲ್ಲತಂಡ ಕಿರಣ್, ಸಿ. ಸುಜನ್ ಪೂವಯ್ಯ, ಬೆಲ್ಲತಂಡ ತಮ್ಮು, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.