ಮಡಿಕೇರಿ, ಜ. ೧: ಸ್ವಾಗತ ಯುವಕ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉತ್ತಮ ಆಡಳಿತ ದಿನದ ಪ್ರಯುಕ್ತ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೨ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಮೇಕೇರಿ, ಕಗ್ಗೋಡ್ಲು, ಬಿಳಿಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಒಟ್ಟು ೭೩ ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು. ಸಭಾ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್‌ರಾಜ್ ಪಾಲ್ಗೊಂಡಿದ್ದರು. ಈ ಸಂದರ್ಭ ೫೦ನೇ ಬಾರಿಗೆ ರಕ್ತದಾನ ಮಾಡಿದ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ ಬಿ.ಎಂ. ರಾಮಪ್ಪ, ಎಲ್‌ಎಲ್ ಬಿ ಪದವಿ ಪೂರೈಸಿದ ಗ್ರಾಮದ ಪದವೀಧರ ಪಿ.ಆರ್. ಪ್ರಜೀತ ರಾಜನ್, ವಿ.ಬಿ ಹರ್ಷಿತಾ, ಸಿ.ವೈ. ಲಿಖಿತ್ ಹಾಗೂ ೧೯೭೪ರಲ್ಲಿ ಮೇಕೇರಿ ಗ್ರಾಮದಲ್ಲಿ ಸ್ವಾಗತ ಯುವಕ ಸಂಘವನ್ನು ಸ್ಥಾಪಿಸಿದ ಸ್ವಾಗತ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಓಡಿಯನ ಉಲ್ಲಾಸ್ ಅವರನ್ನು ಸ್ವಾಗತ ಯುವಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಮೂಲತಃ ಮೇಕೇರಿ ಗ್ರಾಮದ ನಿವಾಸಿಯಾಗಿದ್ದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಎಂ. ರಾಮಪ್ಪ ಅವರು ೫೦ನೇ ಬಾರಿ ರಕ್ತದಾನ ಮಾಡಿದರು. ಈ ಸಂದರ್ಭ ಮಾತನಾಡಿದ ರಾಮಪ್ಪ ಅವರು ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ ಎಂದರು. ಈ ಸಂದರ್ಭ ಗ್ರಾಮದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಕಾರ್ಮಿಕ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಡ್ ನೋಂದಾವಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಕ್ತದಾನದ ಮಹತ್ವದ ಬಗ್ಗೆ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಕಾರ್ಮಿಕ ಅಧಿಕಾರಿ ಯತ್ನಿಟ, ವಿಶ್ವಕರ್ಮ ಕಾರ್ಡ್ ನೋಂದಾವಣೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸಿ.ಎನ್. ರಘು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಗೌರಿ ಶಂಕರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ. ಪೂರ್ಣಯ್ಯ, ಮೇಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಶುಭಾ ಭರತ್, ಗ್ರಾ.ಪಂ. ಸದಸ್ಯರಾದ ಕೆ.ಎನ್. ಕೀರ್ತನ್, ಎಂ.ಯು. ಹನೀಫ್, ಸುಶೀಲಾ ಮಧು, ಮೇಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಬಿತಾ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷೆ ಟಿ.ಯು. ಮೀನಾಕುಮಾರಿ, ಸ್ವಾಗತ ಯುವಕ ಸಂಘದ ಅಧ್ಯಕ್ಷ ಟಿ.ಎನ್. ಉಮೇಶ್, ಕಾರ್ಯದರ್ಶಿ ಪವನ್ ಖಜಾಂಚಿ ಭವನ್ ಹಾಗೂ ಮಾಜಿ ಅಧ್ಯಕ್ಷ ಪಿ.ಎಂ. ದಾಮೋಧರ್ ಸೇರಿದಂತೆ ಸ್ಥಳೀಯರು ಹಾಜರಿದ್ದರು.