ಸೋಮವಾರಪೇಟೆ, ಜ. ೧: ಮುಸ್ಲಿಂ ಮಹಿಳೆಯರ ವಿರುದ್ಧ ಹಿಂದೂಪರ ಸಂಘಟನೆಯ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರಪೇಟೆ ಜಮಾಅತ್ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಧಿಕ್ಕಾರ ಕೂಗಿದರು. ನಂತರ ತಾಲೂಕು ಆಡಳಿತಸೌಧಕ್ಕೆ ಮೆರವಣಿಗೆಯಲ್ಲಿ ತೆರಳಿ, ಪ್ರಭಾಕರ್ ಭಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಗಡೀಪಾರಿಗೆ ಅದೇಶಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ನರಗುಂದ ಅವರ ಮೂಲಕ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸೋಮವಾರಪೇಟೆ ಜಲಾಲಿಯ ಜುಮಾ ಮಸೀದಿ ಅಧ್ಯಕ್ಷ ಎಂ.ಬಿ.ಇಬ್ರಾಹಿA, ಹನಫಿ ಜಾಮಿಯಾ ಮಸೀದಿ ಅಧ್ಯಕ್ಷ ರಹೀಂಬೇಗ್, ಕಲ್ಕಂದೂರು ಜುಮಾ ಮಸೀದಿ ಅಧ್ಯಕ್ಷ ಟಿ.ಎಂ. ಇಬ್ರಾಹಿಂ, ತಣ್ಣೀರುಹಳ್ಳ ಹಿಲಾಲ್ ಜುಮಾ ಮಸೀದಿ ಅಧ್ಯಕ್ಷ ಹಬೀಬ್ ರಹ್ಮಾನ್, ಕಾಗಡೀಕಟ್ಟೆ ಜುಮಾ ಮಸ್ಜಿದ್ ಅಧ್ಯಕ್ಷ ಖಾಲಿದ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.