ಜಪಾನ್‌ನಲ್ಲಿ ಪ್ರಬಲ ಭೂಕಂಪ - ಸುನಾಮಿ ಎಚ್ಚರಿಕೆ

ಟೋಕಿಯೋ, ಜ. ೧: ಇಂದು ಬೆಳಿಗ್ಗೆ ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಬಳಿಕ ಜಪಾನ್ ಕರಾವಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಸೋಮವಾರ ಮಧ್ಯ ಜಪಾನ್‌ನಲ್ಲಿ ೭.೫ ತೀವ್ರತೆಯ ಪ್ರಬಲವಾದ ಭೂಕಂಪ ಸಂಭವಿಸಿದ್ದು, ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಜಪಾನ್ ಕರಾವಳಿ ತೀರಕ್ಕೆ ೧ ರಿಂದ ೨ ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗಿದೆ. ಜಪಾನ್ ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ ೧.೨ ಮೀಟರ್‌ನಿಂದ ೨ ಮೀಟರ್‌ಗಳಷ್ಟು ಎತ್ತರದ ಸುನಾಮಿ ಅಲೆಗಳು ಬಂದಿರುವುದು ದೃಢಪಟ್ಟಿದೆ. ಜಪಾನ್‌ನ ಕರಾವಳಿ ಪ್ರದೇಶ ನೋಟೋದಲ್ಲೂ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿರುವ ಕುರಿತು ವರದಿಯಾಗಿದ್ದು, ಈ ಅಲೆಗಳ ಎತ್ತರ ೫ ಮೀಟರ್‌ವರೆಗೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರಬಿAದುವಿನ ೩೦೦ ಕಿಲೋಮೀಟರ್ (೧೯೦ ಮೈಲುಗಳು) ಒಳಗೆ ಅಪಾಯಕಾರಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿತ್ತು. ಈ ಪ್ರಮಾಣದ ಭೂಕಂಪನ ಸುನಾಮಿ ಅಲೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಇನ್ನು ಜಪಾನ್ ಮಾತ್ರವಲ್ಲದೇ ನೆರೆಯ ರಾಷ್ಟçಗಳಾದ ಉತ್ತರ ಕೊರಿಯಾ ಮತ್ತು ರಷ್ಯಾದಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಉಭಯ ರಾಷ್ಟçಗಳಲ್ಲಿ ಸುನಾಮಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಅಧಿಕಾರಿಗಳು ಕರಾವಳಿ ಪ್ರಾಂತ್ಯದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ರಾಜಕೀಯವಾಗಿ ಮುಗಿಸಲು ಷಡ್ಯಂತ್ರ - ಡಿ.ಕೆ.ಶಿ.

ಬೆಂಗಳೂರು, ಜ. ೧: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆಯುತ್ತಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ಸಿಬಿಐ ತಮಗೆ ನೋಟಿಸ್ ನೀಡಿರುವ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಸಿಎಂ, ಪ್ರಕರಣದ ತನಿಖೆಗೆ ನೀಡಿದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ನಂತರವೂ ನೋಟಿಸ್ ನೀಡಲಾಗಿದೆ. ನನ್ನ ಮೇಲೆ ದೌರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಈಗಾಗಲೇ ಕೇಸ್ ಹಿಂಪಡೆದಿದೆ. ಆದರೂ ಯಾವ ಲೆಕ್ಕಾಚಾರದಲ್ಲಿ ಕೊಟ್ಟಿದ್ದಾರೆ ಗೊತ್ತಿಲ್ಲ. ನನಗೆ ನೋಟೀಸ್ ಬಂದಿಲ್ಲ, ನನ್ನ ಸಂಸ್ಥೆಗೆ ಬಂದಿದೆ. ಹೆಂಡತಿ, ಮಕ್ಕಳ ವಿಚಾರಕ್ಕೆಲ್ಲಾ ಬಂದಿದೆ. ಆಮೇಲೆ ವೈಯಕ್ತಿಕವಾಗಿ ನನ್ನ ಬಳಿ ಬರುತ್ತಾರೆ. ಅವರಿಗೆ ಒಳಗೆ ಹಾಕುವ ಆಸಕ್ತಿ ಇದ್ದರೆ ಹಾಕಿಕೊಳ್ಳಲಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಯಾವುದಕ್ಕೂ ಹೆದರಲ್ಲ. ಸರ್ಕಾರ ಇದನ್ನ ಈಗಾಗಲೇ ಲೋಕಾಯುಕ್ತಕ್ಕೆ ಕೊಟ್ಟಿದೆ. ಮುಂದಿನ ಪ್ರಕ್ರಿಯೆ ಲೋಕಾಯುಕ್ತ ನೋಡಿಕೊಳ್ಳುತ್ತದೆ. ತನಿಖೆ ನಡೆಸುತ್ತೆ ಎಂದರು.

ನೊಬೆಲ್ ಪುರಸ್ಕೃತ ಯೂನಸ್‌ಗೆ ಜೈಲು ಶಿಕ್ಷೆ

ಢಾಕಾ, ಜ. ೧: ಬಾಂಗ್ಲಾದೇಶದ ಕಾರ್ಮಿಕ ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬAಧಿಸಿದAತೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತçಜ್ಞ ಪ್ರೊ. ಮೊಹಮ್ಮದ್ ಯೂನಸ್ ಅವರನ್ನು ತಪ್ಪಿತಸ್ಥ ಎಂದು ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಆದರೆ ಇದು ರಾಜಕೀಯ ಪ್ರೇರಿತ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ. ಪ್ರೊ. ಯೂನಸ್ ಅವರೊಂದಿಗೆ ಗ್ರಾಮೀಣ್ ಟೆಲಿಕಾಮ್‌ನ ಮೂವರು ಸಹೋದ್ಯೋಗಿಗಳನ್ನೂ ಅಪರಾಧಿಗಳು ಎಂದು ನ್ಯಾಯಾಲಯ ಹೇಳಿದೆ. ನಾಲ್ಕೂ ಜನರಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಮೈಕ್ರೋ ಫೈನಾನ್ಸ್ ಪ್ರವರ್ತಕ ೮೩ ವರ್ಷದ ಮೊಹಮ್ಮದ್ ಯೂನಸ್ ಸ್ಥಾಪಿಸಿದ ಬಾಂಗ್ಲಾದೇಶ ಕಂಪನಿಯ ಸಿಬ್ಬಂದಿಗೆ ಹಣ ಪಾವತಿಸದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಡವರ ರಕ್ತ ಹೀರುವ ವ್ಯಕ್ತಿ ಎಂದು ಆರೋಪಿಸುತ್ತಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗಿನ ದೀರ್ಘಕಾಲದ ವೈಷಮ್ಯವನ್ನು ಯೂನಸ್ ಅವರು ಹೊಂದಿದ್ದರು. ಹೀಗಾಗಿಯೇ ೨೦೦೬ರ ನೊಬೆಲ್ ಪ್ರಶಸ್ತಿ ವಿಜೇತ ಯೂನಸ್ ವಿರುದ್ಧ ಹಸೀನಾ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದರು ಎಂದು ವರದಿಯಾಗಿದೆ. ಯೂನಸ್ ವಿರುದ್ಧದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅವರಿಗೆ ಸದ್ಯ ೬ ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ನ್ಯಾಯಾಲಯ ಇನ್ನೂ ಹೆಚ್ಚಿನ ಶಿಕ್ಷೆಯನ್ನು ವಿಧಿಸುವ ಸಾಧ್ಯತೆ ಇದೆ. ಯೂನಸ್ ವಿರುದ್ಧ ಕಾರ್ಮಿಕ ಕಾನೂನು ಉಲ್ಲಂಘನೆಯ ೧೦೦ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಕಾರ್ಮಿಕರ ಪರ ವಕೀಲ ಖುರ್ಷಿದ್ ಆಲಂ ಖಾನ್ ತಿಳಿಸಿದ್ದಾರೆ.

ಕಣ್ಮರೆಯಾಗಿದ್ದ ೯ ವಿದ್ಯಾರ್ಥಿಗಳು ಪತ್ತೆ

ಬೆಳಗಾವಿ, ಜ. ೧: ಚಾರಣಕ್ಕೆ ಹೋಗಿ ಕಣ್ಮರೆಯಾಗಿದ್ದ ೯ ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಕರ್ನಾಟಕ ಹಾಗೂ ಗೋವಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಬೆಳಗಾವಿಯ ಜಿ.ಎಸ್.ಎಸ್. ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ೯ ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ನಾಲ್ಕು ಬೈಕ್‌ಗಳಲ್ಲಿ ಗೋವಾ-ಕರ್ನಾಟಕ ಗಡಿಯ ಪಾರವಾಡ ಗ್ರಾಮದ ಹೊರವಲಯದ ದಟ್ಟ ಅರಣ್ಯದಲ್ಲಿರುವ ಜಾವಾಣಿ ಜಲಪಾತ ವೀಕ್ಷಿಸಲು ತೆರಳಿದ್ದರು. ಪಾರವಾಡ ಗ್ರಾಮದಿಂದ ೩ ಕಿ.ಮೀ ದೂರದವರೆಗೆ ಕಾಲುದಾರಿಯಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದ ಅವರು ಒಂದು ಮರದ ಕೆಳಗೆ ಬೈಕ್ ನಿಲ್ಲಿಸಿ ಅರಣ್ಯದೊಳಗೆ ನಡೆದುಕೊಂಡು ಹೋಗಿದ್ದರು. ಅರಣ್ಯದ ಕಾಲುದಾರಿಯ ಮೂಲಕ ಜಲಪಾತಕ್ಕೆ ತೆರಳಿ, ಪಾರ್ಟಿ ಮಾಡಿದ್ದರು. ಸಂಜೆ ವೇಳೆ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಮರಳುವಾಗ ದಾರಿ ತಪ್ಪಿದ್ದರು. ದಟ್ಟ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಮರಳಿ ಬರುವ ಸಂದರ್ಭದಲ್ಲಿ ತಾವು ಹಾದಿ ತಪ್ಪಿಸಿಕೊಂಡಿದ್ದು, ತಮ್ಮ ನೆರವಿಗೆ ಧಾವಿಸುವಂತೆ ರಾತ್ರಿ ತಮ್ಮ ಕಾಲೇಜಿನ ಸ್ನೇಹಿತರಿಗೆ ಸಂದೇಶ ಕಳಿಸಿದ್ದರು. ಬಳಿಕ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಸಿಎಫ್ ಸಂತೋಷ ಚವಾಣ ನೇತೃತ್ವದ ತಂಡ ರಾತ್ರಿ ೧೦ ಗಂಟೆಗೆ ಪಾರವಾಡ ಅರಣ್ಯದಿಂದ ಕಾರ್ಯಾಚರಣೆ ಆರಂಭಿಸಿತು. ಜೊತೆಗೆ ವಿದ್ಯಾರ್ಥಿಗಳ ನಾಪತ್ತೆ ಸಂಗತಿಯನ್ನು ಗೋವಾದ ಅರಣ್ಯ ಇಲಾಖೆಗೂ ಮುಟ್ಟಿಸಿದ್ದರಿಂದ ಅವರೂ ಗೋವಾ ಅರಣ್ಯದಿಂದ ಕಾರ್ಯಾಚರಣೆ ನಡೆಸಿದರು.

ಒಂದೇ ಕುಟುಂಬದ ೫ ಮಂದಿ ಸಾವು

ಚಂಡೀಗಢ, ಜ. ೧: ಒಂದೇ ಕುಟುಂಬದ ೫ ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ. ಅದಮ್ ಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ೫೯ ವರ್ಷದ ಮನ್‌ಮೋಹನ್ ಸಿಂಗ್, ಅವರ ಪತ್ನಿ, ಇಬ್ಬರು ಮಕ್ಕಳು, ಮೂರು ವರ್ಷದ ಮೊಮ್ಮಗಳ ಶವ ಪತ್ತೆಯಾಗಿದೆ. ಮನಮೋಹನ್ ಅವರ ಶವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತರರ ಮೃತದೇಹ ಅದೇ ಕೋಣೆಯಲ್ಲಿ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಮನಮೋಹನ್ ಸಿಂಗ್ ಅವರು ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ ಕೆಲವು ಹಣಕಾಸಿನ ಸಮಸ್ಯೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.