ಸೋಮವಾರಪೇಟೆ, ಜ. ೧: ಹಲವಾರು ದಶಕಗಳಿಂದ ನಿರ್ವಹಣೆ ಮಾಡಿಕೊಂಡಿದ್ದ ಕಾಫಿ ತೋಟವನ್ನು ಅರಣ್ಯ ಜಾಗವೆಂದು ಕಾರಣ ನೀಡಿ ಸಂಪೂರ್ಣವಾಗಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚ ನ್ಯಾಯಾಲಯ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಹಿತ ನಾಲ್ವರು ಅಧಿಕಾರಿಗಳಿಗೆ ನ್ಯಾಯಾಲಯ ಆದೇಶ ಉಲ್ಲಂಘನೆ ಆರೋಪದಡಿ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಕಳೆದ ೨೦೨೩ರ ಜುಲೈ ೭ ರಂದು ಬೆಳಿಗ್ಗೆ ೮ ಗಂಟೆ ಸುಮಾರಿಗೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳ ಸಹಿತ ಯಂತ್ರಗಳನ್ನು ಉಪಯೋಗಿಸಿ ಸುಮಾರು ೪ ಎಕರೆ ಕಾಫಿ ತೋಟವನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ರೈತ ಸಂಘದ ಪದಾಧಿಕಾರಿಗಳೂ ಸಹ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದರು. ಈ ಬಗ್ಗೆ ನ್ಯಾಯಾಂಗ ಹೋರಾಟ ನಡೆಸಿದ ತೋಟದ ಮಾಲೀಕರು, ಅಂತಿಮವಾಗಿ ಅಧಿಕಾರಿಗಳಿಗೆ ನೋಟೀಸ್ ಆಗುವಂತೆ ಮಾಡಿದ್ದಾರೆ.
ನ್ಯಾಯಾಂಗ ನಿಂದನೆ ಆರೋಪದ ಮೇರೆ ಈ ಹಿಂದೆ ಕೊಡಗಿನಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕಮಲ್ ಕರಿಕಾಳನ್, ಎಸಿಎಫ್ ಗೋಪಾಲ್, ಆರ್ಎಫ್ಓ ಚೇತನ್, ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರುಗಳಿಗೆ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
ತಾಲೂಕಿನ ತಲ್ತರೆಶೆಟ್ಟಳ್ಳಿ ಗ್ರಾಮದ ಸರ್ವೆ ನಂಬರ್ ೨/೧ರಲ್ಲಿ ಬೋಜರಾಜು ಎಂಬವರು ಕಾಫಿ ತೋಟ ಮಾಡಿಕೊಂಡು ಹಲವಾರು ದಶಕಗಳಿಂದ ಜೀವನ ನಡೆಸುತ್ತಿದ್ದು, ಈ ಜಾಗವು ಅರಣ್ಯ ಇಲಾಖೆಗೆ ಸೇರಿದೆ ಎಂದು ಕಾರಣ ನೀಡಿ ಅಧಿಕಾರಿಗಳು ಕಳೆದ ೦೭.೦೭.೨೦೨೩ರಂದು ಸಂಪೂರ್ಣ ವಾಗಿ ತೆರವುಗೊಳಿಸಿದ್ದರು.
೪ ಎಕರೆ ಪ್ರದೇಶದಲ್ಲಿದ್ದ ಫಸಲು ನೀಡುತ್ತಿದ್ದ
(ಮೊದಲ ಪುಟದಿಂದ) ಕಾಫಿ ಗಿಡಗಳು, ಕರಿಮೆಣಸು, ಸಿಲ್ವರ್ ಮರಗಳು, ಕಿತ್ತಳೆ, ಅಡಿಕೆ ಸೇರಿದಂತೆ ಇನ್ನಿತರ ಕೃಷಿ ಸಂಬAಧಿತ ಗಿಡಗಳನ್ನು ಯಂತ್ರಗಳ ಮೂಲಕ ಸಂಪೂರ್ಣವಾಗಿ ತೆರವುಗೊಳಿಸಿ, ಸುತ್ತಲೂ ಕಂದಕ ನಿರ್ಮಿಸಿದ್ದರು.
ಈ ಸಂದರ್ಭ ನ್ಯಾಯಾಲಯದಲ್ಲಿ ಜಾಗಕ್ಕೆ ಸಂಬAಧಿಸಿದAತೆ ತಕರಾರು ಇರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳು, ತೋಟವನ್ನು ತೆರವುಗೊಳಿಸಿದರು. ೭ ದಿನಗಳಿಗೆ ನೋಟೀಸ್ ನೀಡಿದ್ದ ಅಧಿಕಾರಿಗಳು, ೭ನೇ ದಿನವೇ ಸ್ಥಳಕ್ಕೆ ಬಂದು ಸಂಪೂರ್ಣವಾಗಿ ತೆರವು ಮಾಡಿದರು. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿಯಿದೆ. ಇದೊಂದು ದಿನ ಕಾಯಿರಿ ಎಂದು ಎಷ್ಟೇ ಮನವಿ ಮಾಡಿದರೂ ಸ್ಪಂದಿಸದೇ ಅಧಿಕಾರ ಚಲಾಯಿಸಿದರು. ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೋರಿ ಅರ್ಜಿ ಸಲ್ಲಿಸಿದ್ದು, ಅದರಂತೆ ಹೈಕೋರ್ಟ್ ಇದೀಗ ನಾಲ್ವರು ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದೆ. ಫೆ. ೧೩ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ ಎಂದು ಅರ್ಜಿದಾರ, ತಲ್ತರೆಶೆಟ್ಟಳ್ಳಿಯ ಬೋಜರಾಜು ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಕಳೆದ ೧೯೩೭ರಲ್ಲಿ ಬೋಜರಾಜು ಅವರ ಅಜ್ಜನಿಗೆ ಸ.ನಂ. ೨/೧ರಲ್ಲಿ ೯೦ ಸೆಂಟ್ಸ್ ಜಾಗ ಮಂಜೂರಾಗಿತ್ತು. ತದನಂತರ ಸುಮಾರು ೧೦ ಎಕರೆಯಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ, ಏಲಕ್ಕಿ ತೋಟವನ್ನಾಗಿ ಮಾರ್ಪಡಿಸಿದ್ದರು. ೨೦೦೨ರವರೆಗೂ ಆರ್ಟಿಸಿಯಲ್ಲಿ ಪೈಸಾರಿ-ಸರ್ಕಾರದವರು ಎಂದೇ ದಾಖಲೆಯಿತ್ತು. ಈ ನಡುವೆ ೧೯೯೧ರಲ್ಲಿ ಅಕ್ರಮ ಸಕ್ರಮಕ್ಕಾಗಿ ಫಾರಂ ೫೦ರಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕಾಫಿ ತೋಟಕ್ಕೆ ಜಾಗ ನೀಡಲು ಸಾಧ್ಯವಿಲ್ಲವೆಂದು ಅರ್ಜಿ ತಿರಸ್ಕಾರಗೊಂಡಿತು. ೧೯೯೩ರಲ್ಲಿ ಹೈಕೋಟ್ನಲ್ಲಿ ರಿಟ್ ಪಿಟಿಷನ್ ಹಾಕಿದ್ದು, ೧೯೯೮ರಲ್ಲಿ ನ್ಯಾಯಾಲಯ ಅರ್ಜಿಯ ವಿಚಾರಣೆ ಅಂತ್ಯಗೊಳಿಸಿ, ಸಮಿತಿಯವರೇ ಮುಂದಿನ ಕ್ರಮ ಕೈಗೊಳ್ಳುವಂತೆ, ಅರ್ಜಿಯ ಅಂತಿಮ ವಿಲೇವಾರಿಯವರೆಗೂ ತೆರವಿಗೆ ಕ್ರಮಕೈಗೊಳ್ಳದಂತೆ ಸೂಚಿಸಿತ್ತು.
೨೦೦೦ನೇ ವರ್ಷದಲ್ಲಿ ಸಮಿತಿಯಲ್ಲಿ ಅರ್ಜಿ ವಿಚಾರಣೆಗೆ ಬಂದರೂ ತಹಶೀಲ್ದಾರ್ರು ಪಟ್ಟೆ ನೀಡಿರಲಿಲ್ಲ. ಈ ಜಾಗವನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ ಎಂದು ತಿಳಿಸಿ, ಅರ್ಜಿಯನ್ನು ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ್ದರು. ಅಲ್ಲಿಂದ ಮತ್ತೆ ತಾಲೂಕು ಕಚೇರಿಗೆ ಅರ್ಜಿ ವಾಪಸ್ ಆಗಿತ್ತು. ೨೦೧೨ರಲ್ಲಿ ಮತ್ತೆ ಬೋಜರಾಜು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ಪ್ರಗತಿಯಲ್ಲಿರುವಂತೆಯೇ ೨೦೧೭ರಲ್ಲಿ ಅಂದಿನ ಎಸಿಎಫ್, ಅರ್ಜಿದಾರರಿಗೆ ನೋಟೀಸ್ ನೀಡಿ, ತೆರವಿಗೆ ಸೂಚಿಸಿದ್ದರು. ಆಗಲೂ ನ್ಯಾಯಾಲಯದ ಆದೇಶವನ್ನೇ ಅಧಿಕಾರಿಗೆ ನೀಡಲಾಗಿತ್ತು.
ಇದಾದ ೬ ವರ್ಷಗಳ ನಂತರ ೨೦೨೩ರ ಜುಲೈ ೭ ರಂದು ಅರಣ್ಯ, ಕಂದಾಯ, ಪೊಲೀಸ್ ಇಲಾಖೆಗಳ ಮೂಲಕ ಸುಮಾರು ೬೦ಕ್ಕೂ ಅಧಿಕ ಸಿಬ್ಬಂದಿಗಳು ಕಾಫಿ ತೋಟವನ್ನು ಏಕಾಏಕಿ ತೆರವುಗೊಳಿಸಿದರು. ಇಲಾಖೆಯಿಂದ ನೀಡಿದ್ದ ನೋಟೀಸ್ನ ಅವಧಿ ಮುಗಿಯುವ ಮುನ್ನವೇ ಅಧಿಕಾರಿಗಳು ತೋಟವನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ. ಜಾಗಕ್ಕೆ ಸಂಬAಧಿಸಿದ ವ್ಯಾಜ್ಯದ ಬಗ್ಗೆ ತಿಳಿಸಿದರೂ ಸ್ಪಂದನೆ ನೀಡಿಲ್ಲ ಎಂದು ಅರ್ಜಿದಾರ ಬೋಜರಾಜು ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭವೇ ಅಧಿಕಾರಿಗಳು ತೋಟ ತೆರವುಗೊಳಿಸಿರುವುದು ನ್ಯಾಯಾಂಗ ನಿಂದನೆಯಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಹೈಕೋರ್ಟ್ ವಕೀಲ ರುದ್ರಮೂರ್ತಿ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ. ವರಲೆ ಅವರು, ಅಂದಿನ ಸಿಸಿಎಫ್ ಕಮಲ್ ಕರಿಕಾಳನ್, ಈಗಿನ ಎಸಿಎಫ್ ಎ.ಎ. ಗೋಪಾಲ್, ಆರ್ಎಫ್ಓ ಹೆಚ್.ಪಿ.ಚೇತನ್, ತಹಶೀಲ್ದಾರ್ ನರಗುಂದ್ ಅವರುಗಳಿಗೆ ನೋಟೀಸ್ ನೀಡಿದ್ದು, ಫೆ. ೧೩ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.