ಸರ್ಕಾರಿ ಕಚೇರಿಗಳು ಜನಸೇವೆಯ ಕೇಂದ್ರಗಳಾಗಬೇಕು
ಎ.ಎಸ್. ಪೊನ್ನಣ್ಣ
ವೀರಾಜಪೇಟೆ, ಡಿ. ೩೧: ಸರಕಾರಿ ಕಚೇರಿಗಳು ಜನಸೇವೆಯ ಕೇಂದ್ರ ವಾಗಬೇಕು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕ ರೊಂದಿಗೆ ಉತ್ತಮವಾಗಿ ನಡೆದು ಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಮಿನಿವಿಧಾನ ಸೌಧದ ಮೊದಲ ಹಾಗೂ ಎರಡನೇ ಮಹಡಿಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ವಾಹನ ನಿಲುಗಡೆ, ಲಿಫ್ಟ್ ಕಾಂಪೌAಡ್ ಸೇರಿದಂತೆ ಇತರ ಕೆಲ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸಿ ಕೊಡಬೇಕಾಗಿದೆ. ಕೆಲ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿಯಿರುವ ಬಗ್ಗೆ ದೂರುಗಳು ಬರುತ್ತಿವೆ. ಎಲ್ಲಾ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ದೊರಕುವುದರಿಂದ ಸಾರ್ವಜನಿಕರಿಗೆ ಎಲ್ಲಾ ಕೆಲಸಗಳು ಸುಲಭವಾಗಿ ಆಗಲಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಎಂ. ಸುಜಾ ಕುಶಾಲಪ್ಪ ಅವರು ಮಾತನಾಡಿ, ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಬರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಧ್ಯವರ್ತಿಗಳನ್ನು ದೂರವಿಟ್ಟು ಸಾರ್ವಜನಿಕರ ಕೆಲಸಗಳನ್ನು ಶೀಘ್ರದಲ್ಲಿ ಮಾಡಿಕೊಡಬೇಕು. ಸರ್ಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡುವುದರಿಂದ ಇಲಾಖೆಗಳಿಗೆ, ಅಧಿಕಾರಿಗಳಿಗೆ ಕೆಟ್ಟ ಹೆಸರು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ತಹಶೀಲ್ದಾರ್ ಎಚ್.ಎನ್. ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ರಘುರಾಂ ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮವನ್ನು ಶಾಸಕ ಎ.ಎಸ್. ಪೊನ್ನಣ್ಣ ಹೂವಿನ ಗಿಡಕ್ಕೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿದರು. ಪುರಸಭೆಯ ಮುಖ್ಯಾಧಿಕಾರಿ ಎ. ಚಂದ್ರ ಕುಮಾರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿದ್ದೇಗೌಡ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ಪುರಸಭೆಯ ಸದಸ್ಯೆ ಸುನಿತಾ ಜೂನ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಲಿಂಗರಾಜು ವೇದಿಕೆಯಲ್ಲಿದ್ದರು.
ಕಂದಾಯ ಇಲಾಖೆಯ ಅಧಿಕಾರಿ ಎಂ.ಎಲ್. ಹರೀಶ್, ಭೂಮಾಪನ ಇಲಾಖೆ ಸೇರಿದಂತೆ ತಾಲೂಕು ಕಚೇರಿಯ ಸಿಬ್ಬಂದಿಗಳು, ಪುರಸಭೆಯ ಸದಸ್ಯರು, ಸಾರ್ವಜನಿಕರು ಈ ಸಂದರ್ಭ ಉಪಸ್ಥಿತರಿದ್ದರು.
ಮಿನಿವಿಧಾನ ಸೌಧದ ಮೊದಲ ಹಂತದ ಕಾಮಗಾರಿ ಅಂದಾಜು ರೂ. ೨ ಕೋಟಿ ಮೊತ್ತದಲ್ಲಿ ನಡೆದು ೨೦೧೮ ರಲ್ಲಿ ಉದ್ಘಾಟನೆಗೊಂಡಿತ್ತು. ಇದೀಗ ರೂ. ೬.೯೫ ಕೋಟಿ ವೆಚ್ಚದಲ್ಲಿ ಎರಡನೇ ಹಂತದಲ್ಲಿ ಮೊದಲ ಹಾಗೂ ಎರಡನೇ ಮಹಡಿಯ ಕಾಮಗಾರಿ ನಡೆದಿದೆ.