ಮಡಿಕೇರಿ, ಡಿ. ೨೯: ಕೊಡವ ಜನಾಂಗದವರು ತಮ್ಮ ಹಕ್ಕು ಭಾದ್ಯತೆಗಳ ಕುರಿತಾಗಿ ವ್ಯವಸ್ಥಿತ ರೀತಿಯ ಪ್ರಯತ್ನ ನಡೆಯಬೇಕಿದೆ. ಇತರ ಜಾತಿ - ಜನಾಂಗಗಳ ಕುರಿತು ಪರಸ್ಪರ ದೋಷಾರೋಪಣೆ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನ್ಯಾಯೋಚಿತವಾಗಿ ಕೊಡವ ಜನಾಂಗಕ್ಕೆ ಏನು ಸಿಗಬೇಕಿದೆಯೋ ಅದರತ್ತ ಗಂಭೀರ ಚಿಂತನೆ ಹರಿಸಿ ಪ್ರಯತ್ನ ಮಾಡುವುದು ಈಗಿನ ಅಗತ್ಯತೆ ಎಂಬದಾಗಿ ಪ್ರಮುಖರು ಅಭಿಪ್ರಾಯಪಟ್ಟರು.
ಮಡಿಕೇರಿಯಲ್ಲಿ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ವತಿಯಿಂದ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಇಂದು ಆರಂಭವಾದ ವಿಶ್ವ ಕೊಡವ ಸಮ್ಮೇಳನ (ಗ್ಲೋಬಲ್ ಕೊಡವ ಸಮ್ಮಿಟ್) ಕಾರ್ಯ ಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಒಗ್ಗಟ್ಟಿನಿಂದ ಸಮಸ್ಯೆ ಪರಿಹಾರ- ಇತರರ ನಿಂದನೆ ಸಲ್ಲದು
ಅತಿಥಿಗಳಾಗಿದ್ದ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮಾತನಾಡಿ, ದೊಡ್ಡ ಪ್ರಮಾಣದ ಕಾರ್ಯಕ್ರಮ ಮಾಡಲು ಆರ್ಥಿಕ ಕ್ರೋಢೀಕರಣ ಬಹುಮುಖ್ಯವಾಗಿದೆ. ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸದಸ್ಯರ ನಿರಂತರ ಶ್ರಮದಿಂದ ಕೊಡವರು ಒಗ್ಗೂಡಲು ವೇದಿಕೆ ಸೃಷ್ಟಿಯಾಗಿದೆ. ಜನಸಂಖ್ಯೆ ಕಡಿಮೆ ಇರುವ ಜನಾಂಗವನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಅನೇಕ ಸಂಘಟನೆಗಳು ಕಾರ್ಯೋನ್ಮುಖ ಗೊಂಡಿವೆ. ಉಳಿಗಾಲಕ್ಕೆ ನಾವು ಒಂದಾಗಬೇಕು. ಸರಕಾರದಿಂದ ದೊರೆಯಬೇಕಾದ ಹಕ್ಕು, ಬೇಡಿಕೆ ಈಡೇರಬೇಕೆಂಬ ನಿರ್ಣಯ ಮಾಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ರಾಜಕೀಯ ಪ್ರಾಬಲ್ಯ ಇಲ್ಲದಿದ್ದಲ್ಲಿ ನಮ್ಮ ಬೇಡಿಕೆ ಈಡೇರುವುದಿಲ್ಲ. ರಾಜಕೀಯ ಪ್ರಬುದ್ಧತೆ ನಾವು ಸಾಧಿಸಬೇಕು. ಈ ನಿಟ್ಟಿನಲ್ಲಿಯೂ ಚಿಂತನೆ ಅನಿವಾರ್ಯ. ಜಮ್ಮಾಬಾಣೆ ಕಂದಾಯ ನಿಗದಿಗೊಳಿಸಿ ಸಮಸ್ಯೆ ಪರಿಹರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಇದನ್ನು ಬಗೆಹರಿಸುವ ಸಲುವಾಗಿ ಕೆಲಸ ಮಾಡಲಾಗುತ್ತಿದೆ. ೬೪ ಸಾವಿರ ಪಿ ನಂಬರ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜನಾಂಗದಲ್ಲಿ ಒಗ್ಗಟ್ಟು ಇಲ್ಲದಿರುವುದು ಬೇಸರದ ಸಂಗತಿ. ಶೇ. ೮೫ ಕೊಡವರು ವಾರ್ಷಿಕ ರೂ. ೨ ಲಕ್ಷದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
(ಮೊದಲ ಪುಟದಿಂದ) ಕೃಷಿಯನ್ನು ಅವಲಂಭಿಸಿಕೊAಡಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸಿಗದಿದ್ದರೆ ವಲಸೆ ಅನಿವಾರ್ಯವಾಗುತ್ತದೆ. ಜನಾಂಗದ ಹಿತಚಿಂತನೆ ಹೊಂದಿರುವವರನ್ನು ಸ್ವಾಗತಿಸಬೇಕು ಹೊರತು ಟೀಕಿಸುವುದು ಸರಿಯಲ್ಲ. ಭವಿಷ್ಯದ ಬಗ್ಗೆ ಚಿಂತನೆಗಳಿದ್ದರೆ ಸಮ್ಮೇಳನ ಆಂದೋಲನವಾಗಿ ಬದಲಾಗಬೇಕು ಎಂದು ಪೊನ್ನಣ್ಣ ಅಭಿಲಾಷೆ ವ್ಯಕ್ತಪಡಿಸಿದರು.
ಜಾತಿ ಪ್ರಮಾಣ ಪತ್ರದಲ್ಲಿ ಕೊಡವ ಪದ ಬಳಕೆ ಜಾರಿ ಮಾಡಲು ೧೬ ವರ್ಷ ಬೇಕಾಯಿತು. ಕುಲಶಾಸ್ತç ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದರೂ ಸಮರ್ಪಕವಾಗಿಲ್ಲ. ಇತರ ಜಾತಿ, ಧರ್ಮವನ್ನು ಟೀಕಿಸುವುದನ್ನು ನಿಲ್ಲಿಸಬೇಕು. ಇದರಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಆಗುತ್ತದೆ ಕೇವಲ ಜನಾಂಗಕ್ಕೆ ಏನು ಬೇಕು ಎಂಬ ಧ್ಯೇಯ ಸಾಕು ಎಂದು ಹೇಳಿದರು.
ಪಕ್ಷಾತೀತವಾಗಿ ನಮ್ಮ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೆ ಮುಂದಾಗೋಣ. ಕೊಡವ ಕುಲಶಾಸ್ತç ಅಧ್ಯಯನ ಅನುಷ್ಠಾನ ಹಂತದಲ್ಲಿದೆ. ಇದು ಸದ್ಯದಲ್ಲಿ ಕಾರ್ಯಗತಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪೊನ್ನಣ್ಣ, ಬಂದೂಕು ವಿನಾಯಿತಿ ಹಕ್ಕು ಕಸಿಯುವ ಯತ್ನ ನಡೆದಿತ್ತು. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಇದರ ಜವಾಬ್ದಾರಿಯನ್ನು ಅಖಿಲ ಕೊಡವ ಸಮಾಜ ವಹಿಸಿಕೊಳ್ಳಬೇಕು. ವಿನಾಯಿತಿ ಕುರಿತು ಬೀದಿಯಲ್ಲಿ ನಿಂತು ಮಾತನಾಡಿ ಸುಳ್ಳು ಹಬ್ಬಿಸಲಾಗುತ್ತಿದೆ. ನಮಗೆ ಕೋವಿ ವಿನಾಯಿತಿ ಶಾಶ್ವತ ಹಕ್ಕಾಗಿದೆ. ಆದರೆ, ಇದನ್ನು ಕಸಿಯುವ ಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದೀಗ ೧೦ ವರ್ಷ ಮಾತ್ರ ಹಕ್ಕು ಅನುಭವಿಸುವ ಅವಕಾಶ ನೀಡಿದೆ. ನಂತರ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಬೇಕಿದೆ. ಜನಾಂಗದ ಕುರಿತು ಓದಿ ತಿಳಿದುಕೊಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಬರುವ ವಿಚಾರವನ್ನು ನಂಬಬೇಡಿ ಎಂದು ಮನವಿ ಮಾಡಿದರು.
ವಲಸೆ ಹೋದವರು ಮರಳಲಿ
ಮಡಿಕೇರಿ ವಿಧಾಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಬಹಳ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಈ ವೇದಿಕೆಯಿಂದ ಜನಾಂಗದ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ. ವಲಸೆ ಹೋದವರನ್ನು ಮರಳಿ ತಾಯ್ನಾಡಿಗೆ ಕರೆ ತರುವುದರ ಕುರಿತು ಚರ್ಚೆಗಳಾಗಬೇಕು. ಕೊಡವರು ದೇಶಕ್ಕೆ ಮಾಡಿರುವ ಸೇವೆ ಯಾರು ಮರೆಯುವಂತಿಲ್ಲ ಎಂದರು.
ರಾಜಕೀಯ ರಹಿತವಾಗಿರಲಿ
ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ವಿಶಿಷ್ಟ ಸಂಸ್ಕೃತಿಯ ಜನಾಂಗವಾಗಿದೆ. ರಾಜಕೀಯ ರಹಿತವಾಗಿ ಎಲ್ಲರೂ ಒಂದಾಗಬೇಕು. ಕೊಡಗಿನ ಪರಿಸರವನ್ನು ಉಳಿಸಬೇಕು. ಭತ್ತ ಕೃಷಿಗೆ ಉತ್ತೇಜನ ನೀಡಬೇಕು. ಸಬ್ಸಿಡಿ ನೀಡಲು ಸರಕಾರದ ಗಮನ ಸೆಳೆದಿದ್ದೇನೆ. ಕೇರಳದಲ್ಲಿ ಸಬ್ಸಿಡಿ ಇದೆ. ಮಲೆನಾಡು ಭಾಗಕ್ಕೂ ಈ ಸೌಲಭ್ಯ ನೀಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕೊಡವ ಭಾಷೆ ಬಳಕೆ ಹೆಚ್ಚಾಗಬೇಕು. ರಾಜಕೀಯ ಭದ್ರತೆ ಬೇಕಾದರೆ ಕೊಡವರು ರಾಜಕೀಯ ರಹಿತವಾಗಿ ಕುಲಶಾಸ್ತç ಅಧ್ಯಯನ ಬೆಂಬಲ ನೀಡಬೇಕು ಎಂದು ಒತ್ತಿ ಹೇಳಿದರು.
ಸಂಸ್ಕೃತಿಯ ರಕ್ಷಣೆ ಅಗತ್ಯ
ವಿಧಾನ ಪರಿಷತ್ತು ಸದಸ್ಯ ಬುಡಕಟ್ಟು ಸಮುದಾಯದ ಪ್ರತಿನಿಧಿಯಾಗಿರುವ ಶಾಂತರಾಮ್ ಸಿದ್ಧಿ ಮಾತನಾಡಿ, ೪೫೦ ಕಿ.ಮೀ. ದೂರದ ಶಿರಸಿಯಿಂದ ಬಂದಿದ್ದಕ್ಕೆ ಸಂತೃಪ್ತಿ ಇದೆ. ವಿದ್ಯಾವಂತ ಜನಾಂಗವಾದ ಕೊಡವರು ಸಾಂಪ್ರದಾಯಿಕ ಉಡುಪು ಧರಿಸಿ ಬಂದು ಆಚಾರ-ವಿಚಾರ ಉಳಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಗಮನಾರ್ಹ. ಸಂಸ್ಕೃತಿ-ಪರAಪರೆ ಉಳಿಸುವ ನಿಟ್ಟಿನಲ್ಲಿ ಮಾಡಿದ ಈ ಕಾರ್ಯಕ್ರಮ ಒಂದು ಸಾಧನೆ ಎಂದು ಬಣ್ಣಿಸಿದರು. ಸಮಾಜದ ಕೆಲಸ ಮಾಡಲು ಯುವಜನಾಂಗ ಮುಂದೆ ಬರಬೇಕು. ಸಂಸ್ಕೃತಿಯನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ಪಾರಂಪರಿಕ ವಿಚಾರಗಳನ್ನು ಸಕಾರಾತ್ಮಕವಾಗಿ ಅನಾವರಣ ಮಾಡಬೇಕು. ಸಂಪ್ರದಾಯ, ಆಚಾರ-ವಿಚಾರ, ಆಚರಣೆಯಿಂದ ವಿಮುಖರಾದರೆ ಮುಂದಿನ ಜನಾಂಗ ಅಸ್ತಿತ್ವವನ್ನೇ ಕಳೆದುಕೊಂಡು ಜನಾಂಗ ಕುಸಿತ ಕಾಣುತ್ತದೆ. ದೇಶದಲ್ಲಿ ೧೨ ಕೋಟಿ ಬುಡಕಟ್ಟು ಮಂದಿ ಇದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದರೆ ಕುಲಶಾಸ್ತç ಅಧ್ಯಯನವಾಗಬೇಕು. ಅದರ ವರದಿಯನ್ನು ನೀಡಿದ ನಂತರ ಶಾಸನಸಭೆಯಲ್ಲಿ ಒಪ್ಪಿಗೆ ನೀಡಲಾಗುತ್ತದೆ. ಇದಕ್ಕೆ ಯಾರ ವಿರೋಧವೂ ಬರುವುದಿಲ್ಲ ಎಂದರು.
ಪುಸ್ತಕದಿಂದ ಬದಲಾವಣೆ
ರಾಷ್ಟಿçÃಯ ಪಠ್ಯಕ್ರಮ ಸಚಿವಾಲಯದ ಚೀಫ್ ಕನ್ಸಲ್ಟೆಂಟ್ ಡಾ. ಚೇತನ್ ಸಿಂಘೈ ಮಾತನಾಡಿ, ಶಿಕ್ಷಣದ ಪ್ರಾಮುಖ್ಯತೆ ಅರಿತುಕೊಳ್ಳಬೇಕು. ಶಿಕ್ಷಣ ಎಲ್ಲರನ್ನು ಒಂದು ಮಾಡುವ ಅಸ್ತçವಾಗಿದೆ. ಪುಸ್ತಕದಿಂದ ಮಹತ್ತರ ಬದಲಾವಣೆ ಸಾಧ್ಯ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರುವಾಗಿದ್ದಾರೆ.
ಪಠ್ಯ ಜೊತೆಗೆ ನೈತಿಕ ಶಿಕ್ಷಣ ಮುಖ್ಯವಾಗಿದೆ. ವಾತಾವರಣ ನಮಗೆ ಜೀವನ ಪಾಠ ಹೇಳುತ್ತದೆ. ತಪ್ಪು ತಿದ್ದಿಕೊಂಡು ಮುನ್ನಡೆಯಬೇಕು. ಜಾಗತಿಕ ವಿಚಾರದೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಬೇಕು. ಶಿಕ್ಷಣ ಎನ್ನುವುದು ಸಂಭ್ರಮವಾಗಬೇಕು. ಆದರೆ, ದುಬಾರಿಯಾಗಿರುವುದು ವಿಪರ್ಯಾಸ. ರಾಷ್ಟಿçÃಯ ಶಿಕ್ಷಣ ನೀತಿ ಜಾರಿಯಿಂದ ಹೊಸತನ ಸೃಷ್ಟಿಯಾಗಲಿದೆ. ಜೀವನ ಮೌಲ್ಯ ಇರಬೇಕು. ಕೇವಲ ಕಾರ್ಯಕ್ರಮದಲ್ಲಿ ಪರಂಪರೆಯ ಬಗ್ಗೆ ಗೌರವ ತೋರಬಾರದು. ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.
ಒಗ್ಗೂಡಲು ವೇದಿಕೆ
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿ ಪ್ರಪಂಚದ ವಿವಿಧೆಡೆ ಇರುವ ಕೊಡವರನ್ನು ಒಗ್ಗೂಡಿಸುತ್ತಿದೆ ಎಂದು ಶ್ಲಾಘಿಸಿದ ಅವರು, ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ಹೋರಾಡುವವರ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ಸರಿ-ತಪ್ಪುಗಳನ್ನು ಅರಿತು ಟೀಕೆ ಮಾಡಬೇಕು. ಜನಾಂಗದಲ್ಲಿ ಆಗುತ್ತಿರುವ ಅಂತರ್ಜಾತಿ ವಿವಾಹ ಕಡಿಮೆಯಾಗಬೇಕು. ಇಲ್ಲಿನ ಭೂಮಿ ಉಳಿಸಿಕೊಳ್ಳಬೇಕು. ಪದ್ಧತಿ, ಪರಂಪರೆಯನ್ನು ಭಕ್ತಿಯಿಂದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೈವಾಹಿಕ ಜೀವನ ವ್ಯಾಪಾರ ಮಾಡಿಕೊಳ್ಳಬಾರದು. ದಂಪತಿ ನಡುವಿನ ಸಮಸ್ಯೆಗಳನ್ನು ಹಿರಿಯರ ಸಮ್ಮುಖದಲ್ಲಿ ನ್ಯಾಯಾಲಯದ ಮೆಟ್ಟಿಲೇರದೆ ಬಗೆಹರಿಸಿಕೊಳ್ಳಬೇಕು. ಇಲ್ಲಿನ ಭೂಮಿಯನ್ನು ಮಾರಾಟ ಮಾಡದೆ ಉಳಿಸಬೇಕು. ಜನಸಂಖ್ಯೆಯು ಹೆಚ್ಚಾಗಬೇಕು. ವಿನಾಶದಂಚಿನಲ್ಲಿರುವ ಜನಾಂಗ ವನ್ನು ಮೇಲೆತ್ತುವ ಕೆಲಸವಾಗಬೇಕು. ವಿದೇಶದಲ್ಲಿರುವ ಕೊಡವರು ಕನಿಷ್ಟ ೧ ಎಕರೆ ಕೃಷಿ ಭೂಮಿಯನ್ನು ಜಿಲ್ಲೆಯಲ್ಲಿ ಖರೀದಿಸಿ ಕೃಷಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವಿಸ್ತೃತ ವರದಿ
ಸಂಘಟನೆ ಪ್ರಮುಖ ಪಾಲೇಂಗಡ ಅಮಿತ್ ಭೀಮಯ್ಯ ಮಾತನಾಡಿ, ಸಂಘಟನೆ ಸ್ಥಾಪನೆಯಾಗಿ ೬ ವರ್ಷದಲ್ಲಿ ಅನೇಕ ಕಾರ್ಯಕ್ರಮ ಮಾಡಲಾಗಿದೆ. ಜನಾಂಗದ ಒಳಿತು ಕಾಪಾಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ಪ್ರತಿ ಕೊಡವ ಕುಟುಂಬಗಳ ಇತಿಹಾಸ, ಅಸ್ತಿತ್ವ, ಭವಿಷ್ಯದ ಬಗ್ಗೆ, ಆಚಾರ-ವಿಚಾರ, ಸಾಧಕರ ಕುರಿತ ವಿಸ್ಕೃತ ವರದಿ ಸಿದ್ಧಪಡಿಸಿದ್ದೇವೆ. ಕಳೆದ ೫ ವರ್ಷಗಳಿಂದ ಜಾಗತಿಕ ಕೊಡವ ಸಮ್ಮೇಳನ ಮಾಡಬೇಕೆಂಬ ಕನಸು ಹೊಂದಿದ್ದೆವು. ಇದೀಗ ಅದು ಈಡೇರಿದೆ. ಭತ್ತ ಕೃಷಿಯಿಂದ ದೂರ ಉಳಿದ ಪರಿಣಾಮ ಅಂತರ್ಜಲ ಕುಸಿದಿದೆ. ಈ ಹಿನ್ನೆಲೆ ಬೇಲ್ ಪಣಿ ಕಾರ್ಯಕ್ರಮದ ಮೂಲಕ ಕೃಷಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗಿದೆ. ಜನಾಂಗದ ಬಲವರ್ಧನೆ ನಮ್ಮ ಗುರಿಯಾಗಿದೆ. ಪ್ರತಿಯೊಬ್ಬರು ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶವಾಗಿದೆ ಎಂದರು.
ಕೊಡಗಿನ ಕೊಡುಗೆ
ಮಾನವ ಹಕ್ಕುಗಳ ಕಾರ್ಯಕರ್ತೆ ರಶ್ಮಿ ಸುಮಂತ್ ಮಾತನಾಡಿ, ಧೈರ್ಯ ಪದದ ಅರ್ಥ ಕೊಡವ ಎಂಬುದಾಗಿದೆ. ಸೇನೆಗೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಕೊಡಗಾಗಿದೆ. ಕೀಳರಿಮೆಯಿಂದ ಜನಾಂಗ ಅಸ್ತಿತ್ವ ಕುಸಿಯುತ್ತದೆ. ಈ ಬಗ್ಗೆ ಜಾಗೃತಗೊಳ್ಳಬೇಕು. ಎಲ್ಲೇ ಹೋದರು ನಮ್ಮ ಮೂಲವನ್ನು ಮರೆಯಬಾರದು. ನಮ್ಮ ಅಸ್ಮಿತೆಯ ಬಗ್ಗೆ ಅರಿವಿರಬೇಕು. ಮೌಲ್ಯವನ್ನು ನೆನಪಿಟ್ಟುಕೊಂಡು ಮುನ್ನಡೆದರೆ ಕೊಡವ ಜನಾಂಗ ಹಾಗೂ ಕೊಡಗು ಮತ್ತೆ ಭಾರತದ ಕಿರೀಟವಾಗುತ್ತದೆ ಎಂದರು.
ಕನೆಕ್ಟಿಂಗ್ ಕೊಡವಾಸ್ ಅಧ್ಯಕ್ಷ ಶಾಂತೆಯAಡ ನಿರನ್ ನಾಚಪ್ಪ ಮಾತನಾಡಿ, ಸಂಘಟನೆ ಹಲವು ವರ್ಷಗಳಿಂದ ಅಧ್ಯಯನ ನಡೆಸಿದ್ದು, ಜನಾಂಗದ ವಾಸ್ತವದ ಸ್ಥಿತಿಗತಿಯ ಕುರಿತು ಅಧ್ಯಯನ ಮಾಡಿದೆ. ಎಲ್ಲವನ್ನು ದಾಖಲೀಕರಣ ಮಾಡಲಾಗುತ್ತಿದೆ. ಸಾಕಷ್ಟು ಸಮಸ್ಯೆ ಇರುವುದು ಅರಿವಾಗಿದೆ. ಭವಿಷ್ಯದ ಚಿಂತನೆಯ ಕಾರ್ಯಕ್ರಮಗಳ ಅನುಷ್ಠಾನ ಸಂಘಟನೆಯ ಮುಖ್ಯ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉದ್ಯಮಿ ಕುಪ್ಪಂಡ ಛಾಯ ನಂಜಪ್ಪ, ಕನೆಕ್ಟಿಂಗ್ ಕೊಡವಾಸ್ ಉಪಾಧ್ಯಕ್ಷ ಪಟ್ರಪಂಡ ಪಂಥ್ ಮೊಣ್ಣಪ್ಪ ಹಾಜರಿದ್ದರು.
ಆರಂಭದಲ್ಲಿ ತಪ್ಪಡ್ಕ ಕಟ್ಟಿ ಪ್ರಾರ್ಥಿಸಲಾಯಿತು. ಚಾಮೆರ ದಿನೇಶ್ ಹಾಗೂ ನಾಗಂಡ ಕವಿತಾ ಕಾರ್ಯಕ್ರಮ ನಿರೂಪಿಸಿ, ಬೊಳ್ಳೆರ ಪ್ರಥ್ವಿ ವಂದಿಸಿದರು.