ಪ್ರತ್ಯಕ್ಷ ವರದಿ: ಹೊದ್ದೆಟ್ಟಿ ಸುಧೀರ್

ಕರಿಕೆ, ಡಿ. ೨೯: ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾದ ಭಾಗಮಂಡಲ-ಕರಿಕೆ-ಪಾಣತ್ತೂರು ಸಂಪರ್ಕ ರಸ್ತೆ ಹೊಂಡದAತಾಗಿದ್ದು, ಸಂಚಾರಿಸಲು ಪ್ರಯಾಸವಾಗಿದೆ. ಭಾಗಮಂಡಲದಿAದ ಕೇರಳ ಕರ್ನಾಟಕ ಗಡಿ ಕರಿಕೆ ಚೆಂಬೇರಿಗೆ ಇಪ್ಪತ್ತೆಂಟು ಕಿ.ಮೀ. ದೂರವಿದ್ದು, ತಣ್ಣಿಮಾನಿ ಗ್ರಾಮದ ಹಕ್ಕಿಕಂಡಿಯಿAದ ಸುಮಾರು ಹದಿನೈದು ಕಿ.ಮೀ. ರಸ್ತೆ ತಲಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ಹಾಗೂ ಪಟ್ಟಿಘಾಟ್ ಮೀಸಲು ಅರಣ್ಯದ ಮೇಲಡ್ಕದವರೆಗೆ ದಟ್ಟ ಅರಣ್ಯದಲ್ಲಿ ಹಾದು ಹೋಗುತ್ತಿದ್ದು, ವಿಪರೀತ ಮಳೆ ಹಾಗೂ ಸಮರ್ಪಕ ರೀತಿಯಲ್ಲಿ ರಸ್ತೆ ನಿರ್ವಹಣೆ ಮಾಡದ ಕಾರಣ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ಸರಕಾರ ಮಾತ್ರ ರಸ್ತೆ ಅಭಿವೃದ್ಧಿಯತ್ತ ಚಿತ್ತ ಹರಿಸಿಲ್ಲ. ಕಳೆದ ಬಾರಿ ಎರಡು ಕಿ.ಮೀ. ಡಾಮರೀಕರಣ ಮಾಡಿದ್ದು, ಕಳೆದ ಬಾರಿಯ ವಿಪರೀತ ಮಳೆಗೆ ಡಾಮರು ಕಿತ್ತು ಹೋಗಿದ್ದು, ಸುಮಾರು ಹತ್ತು ಕಿ.ಮೀ. ರಸ್ತೆ ಹಳ್ಳದಂತಾಗಿದೆ. ಪ್ರಯಾಣ ಸಂದರ್ಭ ರೋಡ್ ರ‍್ಯಾಲಿ ಅನುಭವವಾಗುತ್ತದೆ. ಈ ಬಾರಿಯಾದರೂ ಪೂರ್ಣ ಪ್ರಮಾಣದಲ್ಲಿ ಡಾಮರೀಕರಣಕ್ಕೆ ಲೋಕೋಪಯೋಗಿ ಇಲಾಖೆ ಕ್ರಮ ವಹಿಸಬೇಕಿದೆ. ಈ ರಸ್ತೆಯು ಒಂದು ಕಡೆಯಿಂದ ಕೇರಳದ ಕಾಸರಗೋಡು ಜಿಲ್ಲೆ ಮತ್ತು ಕಣ್ಣನೂರು ಜಿಲ್ಲೆ ಹಾಗೂ ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದ್ದು, ಸುಳ್ಯಕ್ಕೆ ಕೇವಲ ಇಪ್ಪತ್ತೆರಡು ಕಿ.ಮೀ. ದೂರದಲ್ಲಿ ಕ್ರಮಿಸಬಹುದು.

ಕರಿಕೆ ಗ್ರಾಮಸ್ಥರು ತಮ್ಮ ದೈನಂದಿನ ಕಚೇರಿ ಕೆಲಸಕ್ಕೆ ಭಾಗಮಂಡಲ-ಮಡಿಕೇರಿಗೆ ಇದೇ ರಸ್ತೆ ಮೂಲಕ ದಿನನಿತ್ಯ ಸಂಚರಿಸುವ ಅಗತ್ಯತೆ ಇದ್ದು, ಅನ್ಯ ಜಿಲ್ಲೆಯ ಯಾತ್ರಾರ್ಥಿಗಳು ಭಾಗಮಂಡಲ-ತಲಕಾವೇರಿ ತೀರ್ಥಯಾತ್ರೆ ಮುಗಿಸಿ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಕರಿಕೆ ಮಾರ್ಗವಾಗಿ ತೆರಳಿದಲ್ಲಿ ಅಲ್ಪ ಸಮಯ ಹಾಗೂ ಹತ್ತಿರವಾಗಿದ್ದು, ಯಾತ್ರಾರ್ಥಿಗಳು ಹೆಚ್ಚಾಗಿ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ನೆರೆಯ ಸುಳ್ಯ, ಪೆರಾಜೆ, ಕಲ್ಲಪಳ್ಳಿ ಭಾಗದಲ್ಲಿ ತಮ್ಮ ಸಂಬAಧಿಕರು ಮೃತಪಟ್ಟಲ್ಲಿ ಪಿಂಡ ಪ್ರದಾನ ಸೇರಿದಂತೆ ಇತರೆ ಪಿತೃ ಕಾರ್ಯ ನೆರವೇರಿಸಲು ತ್ರಿವೇಣಿ ಸಂಗಮಕ್ಕೆ ದಿನನಿತ್ಯ ಈ ಮಾರ್ಗದಲ್ಲಿ ಪ್ರಯಾಣಿಸುತ್ತಿರುತ್ತಾರೆ. ಮಾತ್ರವಲ್ಲದೆ, ಪ್ರಮುಖ ಧಾರ್ಮಿಕ ಸ್ಥಳವಾದ ಎಮ್ಮೆಮಾಡುವಿಗೆ ಕಾಸರಗೋಡು ಹಾಗೂ ಕಣ್ಣನೂರು ಸೇರಿದಂತೆ ಕೇರಳದಿಂದ ನೂರಾರು ವಾಹನಗಳ ಹಗಲು-ರಾತ್ರಿ ಸಂಚಾರ ಮಾಡುತ್ತಿದ್ದು, ಪ್ರಯಾಣ ಮಾತ್ರ ಕಷ್ಟಕರವಾಗಿದೆ. ವಾಹನಗಳು ರಸ್ತೆ ಬದಿ ಕೆಟ್ಟುನಿಂತು ದೂರವಾಣಿ ಸಂಪರ್ಕ ಸಿಗದೆ ಪರದಾಡುವ ಪರಿಸ್ಥಿತಿ ದಿನನಿತ್ಯ ಗೋಚರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಕ್ಷೇತ್ರದ ಶಾಸಕರು, ಲೋಕೋಪಯೋಗಿ ಇಲಾಖೆ, ಸರಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಶಾಶ್ವತವಾಗಿ ಈ ಅಂತರ್‌ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಲು ಮುತುವರ್ಜಿ ವಹಿಸಬೇಕೆಂದು ಸಾರ್ವಜನಿಕರು 'ಶಕ್ತಿ' ಮೂಲಕ ಆಗ್ರಹಿಸಿದ್ದಾರೆ.