ಮಡಿಕೇರಿ, ಡಿ. ೨೯: ನಗರದ ಫೀ. ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಜಾಗತಿಕ ಕೊಡವ ಸಮ್ಮೇಳನದಲ್ಲಿ ವಿವಿಧ ವಿಚಾರಗಳ ಕುರಿತ ಸಮಾವೇಶ (ಕಾನ್ಕ್ಲೇವ್) ಜನರ ಗಮನ ಸೆಳೆಯಿತು.
ಕೃಷಿ, ಆರೋಗ್ಯ, ವ್ಯಾಪಾರ ಕುರಿತು ವಿಚಾರ ವಿನಿಮಯವಾಯಿತು. ಪರಸ್ಪರ ಚರ್ಚೆ ಮೂಲಕ ವಿಷಯದ ಬಗ್ಗೆ ಆಳವಾದ ಮಾತುಕತೆ ನಡೆಯಿತು.
ಕೃಷಿ, ಆರೋಗ್ಯ ರಕ್ಷಣೆ ಹಾಗೂ ಸುಧಾರಣೆ, ದೇಶ ತಕ್ಕರ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ವಿಚಾರ ಮಂಡಿಸಿದರು.
'ನಾಡ ಮಣ್ಣ್ ನಾಡ ಕೂಳ್' ಎಂಬ ವಿಚಾರವಾಗಿ ನಡೆದ ಕೃಷಿಗೆ ಪೂರಕವಾದ ಸಂವಾದದಲ್ಲಿ ಕೃಷಿ ಭೂಮಿಯಿಂದಾಗುವ ಅನುಕೂಲ, ಕೃಷಿಯಿಂದ ದೂರವಾದರೆ ಸೃಷ್ಟಿಯಾಗುವ ಪ್ರತಿಕೂಲ ಪರಿಣಾಮದ ಕುರಿತು ನುರಿತರು ತಮ್ಮ ಅಭಿಪ್ರಾಯ ಮಂಡಿಸಿದರು.
ನಲ್ಲೂರು ಗ್ರಾಮದ ಪ್ರಗತಿಪರ ರೈತ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸೋಮೇಯಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಲ್ಲಿ ಕೃಷಿ ಬಗ್ಗೆ ಒಲವು ಮೂಡಿಸುವ ಕೆಲಸವಾಗಬೇಕು. ಕೃಷಿ ಭೂಮಿಗಳನ್ನು ರಸಾಯನಿಕ ಪದಾರ್ಥಗಳು ನುಂಗಿ ಹಾಕಿವೆ. ಇದರಿಂದ ಫಲವತ್ತತೆ ಕಳೆದುಕೊಂಡು ಬಂಜರು ಆಗುತ್ತಿದೆ. ರೈತರು ಈ ಬಗ್ಗೆ ಎಚ್ಚೆತ್ತು ನೈಸರ್ಗಿಕ ಸಾವಯವ ಗೊಬ್ಬರ ಬಳಸಬೇಕು. ಜೊತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭಾಂಶ ಪಡೆಯಬಹುದು. ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಳ್ಳಬಹುದಾಗಿದೆ. ಆರೋಗ್ಯವಂತ ಬದುಕು ಬೇಕಾದರೆ ಕೃಷಿ ಭೂಮಿ ಸತ್ವದಿಂದ ಕೂಡಿರಬೇಕು. ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಕರೆ ನೀಡಿದ ಜೇನಿನ ಪರಾಗ ಸ್ಪರ್ಶದಿಂದ ಕಾಫಿ, ಏಲಕ್ಕಿ ಬೆಳೆ ಉತ್ತಮ ಫಸಲು ದೊರೆಯುತ್ತದೆ. ಈ ಹಿನ್ನೆಲೆ ಜೇನು ಕೃಷಿಗೂ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಇಂದು ಪಾರಂಪರಿಕ ಕೃಷಿ ಪದ್ಧತಿ ಕೈಬಿಟ್ಟು ಆಧುನಿಕ ಪದ್ಧತಿ ಅನುಸರಿಸುತ್ತಿದ್ದೇವೆ. ಇದರಿಂದ ಪ್ರಯೋಜನವಿದೆ. ಸಣ್ಣಪ್ರಮಾಣದ ಭೂಮಿಯಲ್ಲಿಯೂ ಉತ್ತಮ ಇಳುವರಿ ಪಡೆಯಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಆಳವಾದ ಅಧ್ಯಯನ, ನುರಿತರಿಂದ ತಿಳಿದುಕೊಳ್ಳುವ ಮನಸ್ಥಿತಿ ಇರಬೇಕು. ಅತಿವೃಷ್ಟಿ, ಅನಾವೃಷ್ಟಿ, ಮಧ್ಯವರ್ತಿಗಳ ಹಾವಳಿಯಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೃಷಿಯನ್ನು ಬಿಡಬಾರದು. ಮುಂದಿನ ಪೀಳಿಗೆಗೆ ಕೃಷಿ ಮಹತ್ವ ತಿಳಿಸಿ, ಕಲಿಸುವ ಕೆಲಸವಾಗಬೇಕೆಂದು ಕರೆ ನೀಡಿದರು.
ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (ನಬಾರ್ಡ್) ನಿವೃತ್ತ ವ್ಯವಸ್ಥಾಪಕ ಮುಂಡAಡ ಸಿ. ನಾಣಯ್ಯ ಮಾತನಾಡಿ, ನಬಾರ್ಡ್ ರೈತರಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಬೆಳೆ ಮೇಲೆ ಅಲ್ಪಾವಧಿ ಸಾಲ, ಕೃಷಿ ಭೂಮಿ ಅಭಿವೃದ್ಧಿಗೂ ಸಾಲ ನೀಡಲಾಗುತ್ತಿದೆ. ಇದರಿಂದ ಕಡಿಮೆ ಬಡ್ಡಿ ದರದಲ್ಲಿ ಹಣ ದೊರೆತು ಕೃಷಿಯ ಉತ್ತೇಜಕಕ್ಕೆ ಸಹಕಾರಿಯಾಗಿದೆ. ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದು, ಉತ್ತಮ ಇಳುವರಿ ಪಡೆಯುವ ಕುರಿತು ತರಬೇತಿಯನ್ನು ನಬಾರ್ಡ್ ಮೂಲಕ ನೀಡಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆಯ ಮೂಲಕ ಮಾರುಕಟ್ಟೆ ವಿಸ್ತರಣೆಗೂ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಮತ್ಸö್ಯ ಕೃಷಿಕ ಪಟ್ಟಡ ಶ್ಯಾಂ ಅಯ್ಯಪ್ಪ ಮಾತನಾಡಿ, ಹಲವು ಸವಾಲುಗಳ ನಡುವೆ ಕೃಷಿ ಮಾಡುವ ಸ್ಥಿತಿಗೆ ರೈತರು ತಲುಪಿದ್ದಾರೆ. ನಿರೀಕ್ಷಿತ ಪ್ರಮಾಣದ ಆದಾಯ ಸಿಗದೆ ಭೂಮಿಯನ್ನು ಪಾಳು ಬಿಡುವುದು ಅಥವಾ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ಮೀನುಗಾರಿಕೆಯನ್ನು ಕೃಷಿಯೊಂದಿಗೆ ಮಾಡುವುದರಿಂದ ಪರ್ಯಾಯ ಆದಾಯ ಗಳಿಕೆಗೆ ಅವಕಾಶವಿದೆ. ಆದಾಯ ಬಂದರೆ ಸುಸ್ಥಿರ ಕೃಷಿಯನ್ನು ನಿರೀಕ್ಷಿಸಬಹುದಾಗಿದೆ. ಇದಕ್ಕಾಗಿ ಮಾರುಕಟ್ಟೆ ವಿಸ್ತರಣೆಗಿರುವ ಅವಕಾಶಗಳನ್ನು ಅರಿತುಕೊಳ್ಳುವಂತೆ ತಿಳಿಸಿದರು.
ನುಚ್ಚಿಮಣಿಯಂಡ ಡಾ. ಸುಜಾತ ಮುತ್ತಣ್ಣ ಮಾತನಾಡಿ, ನಿರೀಕ್ಷಿತ ಬೇಡಿಕೆ ಭತ್ತ ಬೆಳೆಯನ್ನು ಪೂರೈಸುವಲ್ಲಿ ನಾವು ವಿಫಲರಾಗಿದ್ದೇವೆ. ಗದ್ದೆ ಪಾಳು ಬಿಡಲು ಅನೇಕ ಕಾರಣಗಳಿವೆ. ಕೊಡಗಿನಲ್ಲಿ ವಿವಿಧ ತಳಿಯ ಆವಿಷ್ಕಾರವಾಗಿರುವುದು ಕೊಡಗಿನ ಭತ್ತ ಬೆಳೆಯ ಶ್ರೀಮಂತಿಕೆಯನ್ನು ಅನಾವರಣ ಮಾಡುತ್ತದೆ. ಕೊಡಗಿನಲ್ಲಿ ಅಂತರ್ಜಲಮಟ್ಟ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚಿದೆ. ಆದರೂ ಭತ್ತ ಕೃಷಿಯಿಂದ ದೂರವಾಗಿರುವುದು ಇಡೀ ಸಮಾಜಕ್ಕೆ ಮಾರಕ. ಹೀಗೆ ಮುಂದುವರೆದರೆ ಅಕ್ಕಿಗೆ ಮುಂದಿನ ದಿನಗಳಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಬಾಂಡಿAಗ್ ಬ್ಲೂಮ್ಸ್ ಸಂಘಟನೆ ಸಂಸ್ಥಾಪಕಿ ಬಾಚಮಾಡ ಲಿಜೇಟ್ ಮಾತನಾಡಿ, ೮೦ ಸದಸ್ಯರಿರುವ ನಮ್ಮ ಸಂಘಟನೆ ಪರಿಸರ ಉಳಿವಿಗೆ ಪೂರಕ ಚಟುವಟಿಕೆ ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಪ್ರತಿಯೊಬ್ಬರಲ್ಲಿಯೂ ಕೃಷಿ, ಪರಿಸರ ಉಳಿವಿನ ಕುರಿತು ಅರಿವು ಮೂಡಿದರೆ ಸದುದ್ದೇಶ ಈಡೇರುತ್ತದೆ. ಪಾಳುಬಿದ್ದಿರುವ ಭೂಮಿಯಲ್ಲಿ ನಾಟಿ ಮಾಡಿ ಹಸಿರಿನಿಂದ ಕಂಗೊಳಿಸುವAತೆ ಮಾಡುವುದು ನಮ್ಮ ಸಂಘಟನೆ ಗುರಿಯಾಗಿದೆ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಕುಶಾಲಪ್ಪ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿ, ಭೂಮಿ ಮಾರಾಟ ಮಾಡದಂತೆ ತಡೆಯಲು ಮುಂದಾಗಬೇಕು. ಆದಾಯ ವೃದ್ಧಿಸಲು ವಿಪುಲ ಅವಕಾಶಗಳಿವೆ. ಈ ಮಾಹಿತಿಗಳನ್ನು ತಲುಪಿಸುವ ಕೆಲಸವಾಗಬೇಕು ಎಂದರು.
ಆರೋಗ್ಯ ರಕ್ಷಣೆ ಮತ್ತು ಸುಧಾರಣೆ ಕುರಿತು ಬೊಪ್ಪಂಡ ರಶ್ಮಿ ಅಯ್ಯಪ್ಪ ಹಾಗೂ ಬಲ್ಯಾಟಂಡ ಪೂಣಚ್ಚ ಮಾಚಯ್ಯ, ವ್ಯಾಪಾರದ ಕುರಿತು ಪುಗ್ಗೇರ ದೇವಯ್ಯ, ಚೇನಂಡ ದರ್ಶನ್, ಕುಂಡ್ಯೋಳAಡ ದಿನೇಶ್ ವಿಚಾರ ಮಂಡಿಸಿದರು.