*ಗೋಣಿಕೊಪ್ಪ, ಡಿ. ೨೮: ಕೊಡವ ತಕ್ಕ್ ಎಳ್ತ್ಕಾರಡ ಕೂಟ, ಹಳ್ಳಿಗಟ್ಟ್ ನಿನಾದ ವಿದ್ಯಾಸಂಸ್ಥೆ ಆಶ್ರಯದಲ್ಲಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕೊಡವ ಸಾಹಿತ್ಯ ಮಾಲೆ ಯೋಜನೆಯಲ್ಲಿ ರುದ್ರಾಕ್ಷಿ ಮಾಲೆ, ಡ್ಯಾನಿರ ಚುಯಿಂಕ್ ಎಂಬ ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು.

ನಿನಾದ ವಿದ್ಯಾಸಂಸ್ಥೆಯಲ್ಲಿ ನಡೆದ ಕೊಡವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂಕಳೆರ ಟೈನಿ ಪೂಣಚ್ಚ ಅವರು ಬರೆದ "ರುದ್ರಾಕ್ಷಿ ಮಾಲೆ", ತಂಬAಡ ಡ್ಯಾನಿ ನಾಣಯ್ಯ ಬರೆದ "ಡ್ಯಾನಿರ ಚುಯಿಂಕ್" ಬಿಡುಗಡೆಗೊಂಡಿತು.

ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಕೇವಲ ಪ್ರಶಸ್ತಿ, ಸನ್ಮಾನಗಳನ್ನು ಪಡೆಯುವ ಹಾಗೂ ತಾನೋರ್ವ ಲೇಖಕನೆಂದು ಗುರುತಿಸಿಕೊಳ್ಳುವ ದುರಾಸೆಯಿಂದ ಬರೆಯುವವರು ಉತ್ತಮ ಲೇಖಕರಾಗಲಾರರು. ಸಾಹಿತ್ಯ ಸೃಷ್ಟಿ ಒಂದು ತಪಸ್ಸು, ಅದು ಅರ್ಥ ಕಳೆದುಕೊಳ್ಳಬಾರದು. ಭಾವನೆಗೆ ನೀಡಬಹುದಾದ ಅಕ್ಷರ ರೂಪವನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ದತ್ತಿನಿಧಿ ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ ಮಾತನಾಡಿ, ವಿದ್ಯಾರ್ಥಿಗಳಾಗಿರುವಾಗಲೇ ಮಕ್ಕಳಿಗೆ ಮಾತೃಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಕಲಿಸಬೇಕು. ಪೋಷಕರು ಹಾಗೂ ಶಿಕ್ಷಕರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಏನೇ ಸಾಧನೆ ಮಾಡಿದರೂ ತಾವು ಹುಟ್ಟಿ ಬೆಳೆದ ಕೊಡಗಿನ ಈ ಮಣ್ಣನ್ನು ಮರೆಯಬಾರದು ಎಂದು ಸಲಹೆ ನೀಡಿದರು.

‘ರುದ್ರಾಕ್ಷಿಮಾಲೆ' ಪುಸ್ತಕವನ್ನು ದಾನಿಗಳಾದ ಮೂಕಳೆರ ಸುರೇಶ್ ಪೂಣಚ್ಚ, ಬಿಡುಗಡೆ ಮಾಡಿದರು. ‘ಡ್ಯಾನಿರ ಚುಯಿಂಕ್' ಪುಸ್ತಕ ಬಿಡುಗಡೆಯನ್ನು ತಂಬAಡ ಕುಶಿ ನಾಣಯ್ಯ ಮಾಡಿದರು.

ಕೈಬಿಲೀರ ಬೋಪಯ್ಯ ದತ್ತಿನಿಧಿ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ಕೊಟ್ರಂಗಡ ಸಜನಿ ಸೋಮಯ್ಯ ಪ್ರಥಮ, ಅಜ್ಜಿಕುಟ್ಟಿರ ಭವ್ಯ ದ್ವಿತೀಯ, ಸಣ್ಣುವಂಡ ಅಕ್ಕಮ್ಮ ತೃತೀಯ ಬಹುಮಾನವನ್ನು ಇಟ್ಟೀರ ರಾಜಪ್ಪ ದತ್ತಿನಿಧಿ ಚುಟುಕ ಬರೆಯುವ ಸ್ಪರ್ಧೆಯಲ್ಲಿ ಪಂದ್ಯAಡ ರೇಣುಕ ಸೋಮಯ್ಯ ಪ್ರಥಮ, ಬಾದುಮಂಡ ಬೀನ ಕಾಳಯ್ಯ ದ್ವಿತೀಯ, ಮುಕ್ಕಾಟಿರ ಮೌನಿ ನಾಣಯ್ಯ ತೃತೀಯ ಬಹುಮಾನ ಪಡೆದುಕೊಂಡರು.

ಈ ಸಂದರ್ಭ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗಕ್ಕೆ ನಡೆದ ಕೊಡವ ಭಾಷೆಯ ಹಾಡುಗಾರಿಕೆ, ಕೊಡವ ಪುಸ್ತಕ ಓದುವುದು, ಕೊಡವ ಶಬ್ದ ಹೇಳುವ ಸ್ಪರ್ಧೆ, ಕೊಡವ ಭಾಷೆಯಲ್ಲಿ ಆಶುಭಾಷಣ, ಕೊಡವ ಭಾಷೆಯ ಹಾಸ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿಭಾಗವಾರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು. ನಿನಾದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಕೊಡವ ನೃತ್ಯ ಪ್ರದರ್ಶನ ನಡೆಯಿತು. ನಿನಾದ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶಿಲ್ಪ, ಆಡಳಿತ ಅಧಿಕಾರಿ ನಾಗೇಂದ್ರ ಇದ್ದರು.