ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ರೂ. ೧ ಸಾವಿರ ಕೋಟಿ
ಬೆಂಗಳೂರು, ಡಿ. ೨೯: ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ೧ ಸಾವಿರ ಕೋಟಿ ರೂಪಾಯಿ ಕ್ರಿಯಾ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ರೂ. ೧ ಸಾವಿರ ಕೋಟಿ ಕ್ರಿಯಾ ಯೋಜನೆ ರೂಪಿಸಬೇಕು. ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ರೂಪಿಸಬೇಕು. ಈ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳನ್ನು ಗುರುತಿಸಿ, ಅನುದಾನ ಹಂಚಿಕೆ ಮಾಡಬೇಕು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿ ವೇತನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಇದನ್ನು ಭರಿಸಲು ತೀರ್ಮಾನಿಸಿದ್ದು, ೬.೪ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೆ ಸಿದ್ಧವಾಗಿದೆ. ಆಯವ್ಯಯದಲ್ಲಿ ೬೦ ಕೋಟಿ ರೂ. ನಿಗದಿಯಾಗಿದ್ದು, ಇಲಾಖೆಗೆ ಲಭ್ಯ ಅನುದಾನದಲ್ಲಿಯೇ ಮರುಹಂಚಿಕೆ ಮಾಡಿ ಹೆಚ್ಚುವರಿ ೪೦ ಕೋಟಿ ಭರಿಸಬೇಕು ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರಿಗೆ ಸವಲತ್ತು ವಿತರಿಸುವ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಭಾರಿ ಪ್ರಮಾಣದಲ್ಲಿ ಅರ್ಜಿ ಸ್ವೀಕೃತವಾಗಿದ್ದು, ಮುಂದಿನ ವರ್ಷ ಇದಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.
ಉದ್ಯೋಗಾಕಾAಕ್ಷಿಗಳಿಗೆ ಜನವರಿಯಲ್ಲಿ ಉದ್ಯೋಗ ಮೇಳ
ಬೆಂಗಳೂರು, ಡಿ. ೨೯: ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲು ಯೋಜಿಸಿದೆ. ಜನವರಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಅದನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಸಚಿವರ ತಂಡವನ್ನು ರಚಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸುವ ಸಂಬAಧ ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಇಂದು ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಉದ್ಯೋಗ ನೀತಿಯ ಅಗತ್ಯವನ್ನು ಒತ್ತಿ ಹೇಳಿದ ಅವರು, ನೀತಿಯನ್ನು ರೂಪಿಸಲು ಸಿದ್ಧತೆಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಐಟಿ ಮತ್ತು ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನೊಳಗೊಂಡ ಸಚಿವರ ತಂಡವನ್ನು ಸಿಎಂ ಸಿದ್ದರಾಮಯ್ಯ ರಚಿಸಿದರು. ಸಚಿವರ ತಂಡವು ಉದ್ಯೋಗದಾತರೊಂದಿಗೆ ಸಭೆ ಮತ್ತು ಚರ್ಚೆಗಳನ್ನು ನಡೆಸಬೇಕು ಮತ್ತು ಉದ್ಯೋಗ ಮೇಳದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದ ಸಿದ್ದರಾಮಯ್ಯ, ಉದ್ಯೋಗಾಕಾಂಕ್ಷಿಗಳ ಕೌಶಲ್ಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಕೈಗಾರಿಕೆಗಳೊಂದಿಗೆ ಚರ್ಚಿಸಿ ದೂರಗಾಮಿ ಕಾರ್ಯಕ್ರಮ ರೂಪಿಸಲು ಮತ್ತು ಕೈಗಾರಿಕೆಗಳ ಅಗತ್ಯತೆಗಳು ಪೂರೈಸಲು ಶಿಫಾರಸು ಮಾಡುವಂತೆ ಸಚಿವರ ತಂಡಕ್ಕೆ ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು.
ಚೆಕ್ ಬೌನ್ಸ್ ಪ್ರಕರಣ: ಮಧು ಬಂಗಾರಪ್ಪಗೆ ದಂಡ
ಬೆAಗಳೂರು, ಡಿ. ೨೯: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಾಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ೬ ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ೬ ಕೋಟಿ ೯೬ ಲಕ್ಷ ೬೦ ಸಾವಿರ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಗಿದ್ದು, ಸರ್ಕಾರಕ್ಕೆ ೧೦ ಸಾವಿರ ರೂಪಾಯಿ ದಂಡ ಪಾವತಿಸಬೇಕೆಂದು ಕೋರ್ಟ್ ಆದೇಶ ಹೊರಡಿಸಿದೆ. ದೂರುದಾರರಿಗೆ ನೀಡಬೇಕಿರುವ ಹಣದ ಜೊತೆಗೆ ದಂಡ ಪಾವತಿಸದೇ ಇದ್ದಲ್ಲಿ ೬ ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಕೋರ್ಟ್ ಹೇಳಿದೆ. ಮಧು ಬಂಗಾರಪ್ಪ ದೂರುದಾರರಿಗೆ ಕೇವಲ ರೂ. ೫೦ ಲಕ್ಷ ನೀಡಿ ಉಳಿದ ಹಣ ಪಾವತಿಸಿರಲಿಲ್ಲ. ಜನವರಿ ೩೦ ರೊಳಗೆ ರೂ. ೬.೧೦ ಲಕ್ಷ ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆದರೆ ವಿಶೇಷ ಕೋರ್ಟ್, ಮುಚ್ಚಳಿಕೆ ಒಪ್ಪಲು ನಿರಾಕರಿಸಿದ್ದು, ಈ ಹಿಂದೆಯೂ ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸಿಲ್ಲ ಆದ್ದರಿಂದ ಮನವಿಯನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿದೆ.