ಗೋಣಿಕೊಪ್ಪಲು, ಡಿ. ೨೯: ೧೫ನೇ ವರ್ಷದ ಶ್ವಾನ ಪ್ರದರ್ಶನವು ಗೋಣಿಕೊಪ್ಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಕೆನಲ್ ಕ್ಲಬ್ ಪಾಲಿಬೆಟ್ಟ, ಕರ್ನಾಟಕ ಪಶುವೈದ್ಯರ ಸಂಘ, ಕೊಡಗು ಜಿಲ್ಲಾ ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪದ ಜಂಟಿ ಆಶ್ರಯದಲ್ಲಿ ನಡೆಯಿತು. ಕೊಡಗು ಜಿಲ್ಲೆ ಸೇರಿದಂತೆ ಮೈಸೂರು ಹಾಗೂ ಇತರ ಭಾಗದಿಂದ ೯೦ ಸ್ಪರ್ಧಿಗಳು ತಮ್ಮ ಶ್ವಾನಗಳೊಂದಿಗೆ ಆಗಮಿಸಿ ಉತ್ತಮ ಪ್ರದರ್ಶನ ನೀಡಿದರು.
ಭಾಗವಹಿಸಿದ ೧೫ ವಿವಿಧ ತಳಿಗಳಲ್ಲಿ ಮೊದಲ ಬಹುಮಾನ ಗಳನ್ನು ಶ್ವಾನಗಳ ಮಾಲೀಕರು ಪಡೆದರು. ಪೊಡ್ಲೆ ತಳಿಯ ಶ್ವಾನದ ಮಾಲೀಕರಾದ ಬೇಗೂರಿನ ಗೌರವ್ ಕಾರ್ಯಪ್ಪ ತಮ್ಮದಾಗಿಸಿಕೊಂಡರು, ಪೊಮೋರಿಯನ್ ತಳಿಯಲ್ಲಿ ಅತ್ತೂರಿನ ತರುಣ್ ಮಂದಣ್ಣ ವಿಜೇತರಾದರು. ಕೇನ್ ಕಾರ್ಸೋ ತಳಿಯಲ್ಲಿ ಕರುಣ್ ಮಂದಣ್ಣ ಬಹುಮಾನ ವಿಜೇತರಾದರು. ಗೋಲ್ಡನ್ ರಿಟ್ರಿವೇರ್ ತಳಿಯಲ್ಲಿ ಮೈಸೂರಿನ ಸುಪ್ರಿತ್ ಪ್ರಥಮ ಬಹುಮಾನ ಗಿಟ್ಟಿಸಿಕೊಂಡರು. ರಾಟ್ವಿಲ್ಹರ್ನಲ್ಲಿ ಗೋಣಿಕೊಪ್ಪದ ವಂದಿತ ಬಹುಮಾನ ಪಡೆದರೆ ಸೈಬೇರಿಯನ್ ಹಸ್ಕಿ ತಳಿಯಲ್ಲಿ ಮೈಸೂರಿನ ತೇಜಸ್ ಬಹುಮಾನ ತಮ್ಮದಾಗಿಸಿಕೊಂಡರು.
ಲ್ಯಾಬ್ರಡಾರ್ ಹಾಗೂ ಡಾಬರ್ಮನ್ ತಳಿಯಲ್ಲಿ ಕರುಣ್ ಮಂದಣ್ಣ ಬಹುಮಾನ ಗಿಟ್ಟಿಸಿ ಕೊಂಡರು. ಗ್ರೇಟ್ಡೇನ್ನಲ್ಲಿ ದೇವರಪುರದ ಕಿರಿಯಮಾಡ ಅರುಣ್ ಪೂಣಚ್ಚ ಪ್ರಥಮ ಬಹುಮಾನ ಪಡೆದರು. ಜರ್ಮನ್ ಶೆಫರ್ಡ್ನಲ್ಲಿ ಬೇಗೂರಿನ ಗೌರವ್ ಕಾರ್ಯಪ್ಪ ಹಾಗೂ ಬೆಲ್ಜಿಯನ್ ಮಲಾನಿಯಸ್ ನಲ್ಲಿ ಶ್ರೀಮಂಗಲದ ಎ.ಪಿ. ಚಂಗಪ್ಪ ಬಹುಮಾನ ಗಿಟ್ಟಿಸಿಕೊಂಡರು. ಲ್ಯಾಸ್ ಆಮ್ಸೋ ತಳಿಯಲ್ಲಿ ಮರಗೋಡುವಿನ ರೋಶನ್ ಪ್ರಥಮ ಬಹುಮಾನ ಪಡೆದರು. ಅಮೇರಿಕನ್ ಬುಲ್ಲಿ ತಳಿಯಲ್ಲಿ ಅತ್ತೂರಿನ ಕರುಣ್ ಮಂದಣ್ಣ ಬಹುಮಾನ ಗಿಟ್ಟಿಸಿದರು. ಬಾಕ್ಸರ್ ತಳಿಯಲ್ಲಿ ಪಾಲಿಬೆಟ್ಟದ ಸೋಮಣ್ಣ ಹಾಗೂ ಡ್ಯಾಶ್ ಹೌಂಡ್ ತಳಿಯಲ್ಲಿ ಕಳತ್ಮಾಡುವಿನ ಜೆನ್ಸಿ ಸುಬ್ಬಯ್ಯ ಪ್ರಥಮ ಬಹುಮಾನಗಳನ್ನು ಪಡೆದರು. ತೀರ್ಪುಗಾರರಾಗಿ ಬೆಂಗಳೂರಿನ ಕರುಣಾ ಪ್ರಾಣಿ ದಯಾ ಸಂಘದ ಅಧ್ಯಕ್ಷ ಡಾ. ಜಯರಾಮಯ್ಯ, ಮೈಸೂರು ಕೆನಲ್ ಕ್ಲಬ್ನ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ. ಅರುಣ್, ಮೈಸೂರಿನ ನಿವೃತ್ತ ಉಪನಿರ್ದೇಶಕ ಡಾ. ಷಡಾಕ್ಷರ ಮೂರ್ತಿ ಭಾಗವಹಿಸಿದ್ದರು.
ಕೊಡಗು ಕೆನಲ್ ಕ್ಲಬ್ ಪಾಲಿಬೆಟ್ಟ, ಕರ್ನಾಟಕ ಪಶುವೈದ್ಯರ ಸಂಘದ ಕಾರ್ಯದರ್ಶಿ ಡಾ. ಶಾಂತೇಶ್ ಸ್ವಾಗತಿಸಿದರು. ಪದಾಧಿಕಾರಿಗಳಾದ ಡಾ. ಗಿರೀಶ್, ಡಾ. ರಾಕೇಶ್, ನಿರೂಪಿಸಿ, ವಂದಿಸಿದರು.