ಸೋಮವಾರಪೇಟೆ, ಡಿ. ೨೭: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೬೦ ಅಂಗಡಿ ಮಳಿಗೆಗಳ ಅವಧಿ ಮೀರಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದರಂತೆ ಟೆಂಡರನ್ನು ಮುಂದೂಡದೇ ನಿಯಮಾನುಸಾರ ಟೆಂಡರ್ ನಡೆಸುವಂತೆ ಆಗ್ರಹಿಸಿ ಸಾರ್ವಜನಿಕರು ಪ.ಪಂ. ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ನರಗುಂದ್ ಅವರಿಗೆ ಮನವಿ ಸಲ್ಲಿಸಿದರು.

ತಾ. ೧೯ ರಂದು ಟೆಂಡರ್‌ಗೆ ಡಿ.ಡಿ. ತೆಗೆಯಲಾಗಿದ್ದು, ತಾ. ೨೧ ರಂದು ಟೆಂಡರ್ ನಡೆಸುವಂತೆ ತೀರ್ಮಾನಿಲಾಗಿತ್ತು. ಆದರೆ ಈವರೆಗೆ ಟೆಂಡರ್ ನಡೆಸಿಲ್ಲ. ಕಳೆದ ೨೪ ವರ್ಷಗಳಿಂದ ಹರಾಜು ಪ್ರಕ್ರಿಯೆ ನಡೆದಿಲ್ಲ. ಇದೀಗ ಪರಿಶಿಷ್ಟ ಜಾತಿ ಮತ್ತು ಪಂಗಡ, ವಿಶೇಷಚೇತನರಿಗೆ ಮೀಸಲಾತಿಯಡಿ ಮಳಿಗೆ ನಿಗದಿಗೊಳಿಸಲಾಗಿದೆ. ಇದನ್ನು ವಿರೋಧಿಸಿ ಪ.ಪಂ. ಸದಸ್ಯರುಗಳು ಟೆಂಡರ್ ಮುಂದೂಡಲು ಒತ್ತಾಯಿಸುತ್ತಿದ್ದಾರೆ. ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸದಸ್ಯತ್ವ ವಜಾಗೊಳಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಇದರೊಂದಿಗೆ ತಾ. ೩೦ ರೊಳಗೆ ಟೆಂಡರ್ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿ ಸುರೇಶ್ ಶೆಟ್ಟಿ, ಶಾಂತಳ್ಳಿ ಪ್ರತಾಪ್, ಟಿ.ಈ. ಸುರೇಶ್, ಮಂಜುನಾಥ್, ಚಂದ್ರಶೇಖರ್, ಸುಜಿತ್, ಹಾಲಪ್ಪ ಸೇರಿದಂತೆ ಇತರರು ಆಡಳಿತಾಧಿಕಾರಿ ನರಗುಂದ್ ಅವರಿಗೆ ಮನವಿ ಸಲ್ಲಿಸಿದರು.