ವೀರಾಜಪೇಟೆ , ಡಿ. ೨೭: ಕಾವೇರಿ ಪದವಿ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಘಟಕದ ಆಪ್ತ ಸಮಾಲೋಚಕ ಚಿಟ್ಟಿಯಪ್ಪ ಏಡ್ಸ್ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಏಡ್ಸ್ ಹರಡದಂತೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಪದವಿ ಕಾಲೇಜು ಪ್ರಾಂಶುಪಾಲ ಡಾ. ಆನಂದ್ ಕಾರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನವನ್ನು ಮಾಡುವುದರಿಂದ ಒಂದು ಜೀವವನ್ನು ಉಳಿಸಿದ ಸೌಭಾಗ್ಯ ನಮ್ಮದಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಸುನಿಲ್ ಕುಮಾರ್ ಬಿ.ಬಿ., ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಸಂಚಾಲಕಿ ಅಂಬಿಕಾ ಉಪಸ್ಥಿತರಿದ್ದರು. ವಿಶ್ವ ಏಡ್ಸ್ ದಿನದ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಎನ್.ಎಸ್.ಎಸ್ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಜರಿದ್ದರು.