ವೀರಾಜಪೇಟೆ, ಡಿ. ೨೭: ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಅವರ ಆದರ್ಶವನ್ನು ಪಾಲಿಸಬೇಕು ಎಂದು ಸರ್ವೋದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ಕೆ. ವಾಸಂತಿ ಹೇಳಿದರು.

ಇಲ್ಲಿನ ಪಂಜರುಪೇಟೆಯಲ್ಲಿರುವ ಸರ್ವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಳಿ ಮಗ್ಗ ಸಮಾಜ ದಕ್ಷಿಣ ಕೊಡಗು ಇದರ ನಾಲ್ಕನೇ ವರ್ಷದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು. ವಿದ್ಯಾವಂತರಾಗಿ ಉನ್ನತ ಹುದ್ದೆಗೇರುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಗೋಣಿಕೊಪ್ಪಲು ಚೆಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಸಂಘಟನೆಯ ಮೂಲಕ ನಮ್ಮ ಸಂಸ್ಕöÈತಿ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಬಿಳಿ ಮಗ್ಗ ಸಮಾಜದ ಅಧ್ಯಕ್ಷ ಬಿ.ಆರ್. ಅನಿಲ್ ಕುಮಾರ್ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಬಿಳಿ ಮಗ್ಗ ಸಮಾಜದ ಜನಾಂಗದ ಬಾಂಧವರು ಅಧಿಕ ಸಂಖ್ಯೆಯಲ್ಲಿದ್ದು, ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆ ಇರುವುದರಿಂದ ಸರಕಾರದ ಜಾಗವನ್ನು ನೀಡುವಂತೆ ಮನವಿ ಸಲ್ಲಿಸಿ ಒತ್ತಾಯಿಸುವುದಾಗಿ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ತ್ಯಾಗರಾಜ್ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಚೇತನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಿ.ಟಿ. ಕವನ ಸ್ವಾಗತಿಸಿದರು, ಲಿಖಿತ ಪ್ರಾರ್ಥಿಸಿದರು, ಉಷಾರಾಣಿ ಕಾರ್ಯಕ್ರಮ ನಿರೂಪಿಸಿ, ಬಿ.ಟಿ. ದೇವರಾಜ್ ವಂದಿಸಿದರು.