ವೀರಾಜಪೇಟೆ, ಡಿ. ೨೭: ವೀರಾಜಪೇಟೆಯ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ದುರ್ಗಾ ಪ್ರಸಾದ್ ಮಾತನಾಡಿ, ಮನುಷ್ಯನಿಗೆ ಅನೇಕ ಬಾರಿ ರಕ್ತದ ಅವಶ್ಯಕತೆ ಬರುತ್ತದೆ. ಆ ಸಂದರ್ಭಗಳಲ್ಲಿ ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ, ಮನುಷ್ಯನ ರಕ್ತಕ್ಕೆ ಮನುಷ್ಯನೆ ರಕ್ತ ನೀಡಬೇಕು, ಯಾವುದೇ ಪರ್ಯಾಯ ವ್ಯವಸ್ಥೆ ಇರುವುದಿಲ್ಲ ಎಂದರು.

ವೀರಾಜಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿಶ್ವನಾಥ ಸಿಂಪಿ ಮಾತನಾಡಿ, ಕೆಲವೊಂದು ವೇಳೆ ಮನುಷ್ಯರಿಗೆ ರಕ್ತಹೀನತೆ, ಶಸ್ತçಚಿಕಿತ್ಸೆ, ಹೆರಿಗೆ ಸಂದರ್ಭಗಳಲ್ಲಿ ಕೆಲವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆ ಸಂದರ್ಭದಲ್ಲಿ ನಾವು ಜಿಲ್ಲಾ ರಕ್ತನಿಧಿ ಕೇಂದ್ರದ ಉಪಯೋಗ ಪಡೆದು ರೋಗಿಗಳಿಗೆ ಅಗತ್ಯ ರಕ್ತವನ್ನು ನೀಡಿ ರೋಗಿಗಳನ್ನು, ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ. ಆದರೆ ಜಿಲ್ಲಾ ಕೇಂದ್ರಕ್ಕೆ ರಕ್ತವನ್ನು ಪೂರೈಸುವುದು ಇಂತಹ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದರೆ ಮಾತ್ರ ಸಾಧ್ಯ. ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಾ ಸಂಘಟನೆಗಳು, ಸಂಘಗಳು, ಸಂಸ್ಥೆಗಳು ಹೆಚ್ಚು ಹೆಚ್ಚು ಆಯೋಜನೆ ಮಾಡಿದರೆ ಮಾತ್ರ ಸಾಧ್ಯ. ಕೋವಿಡ್ ಸಮಯದಲ್ಲಿ ರಕ್ತದ ಅವಶ್ಯಕತೆ ಇತ್ತು. ಆದರೆ ಆ ಸಮಯದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಯಾವುದೇ ಕಾರಣಕ್ಕೂ ಹೆಚ್ಚು ಜನರು ಒಂದು ಕಡೆ ಸೇರದಂತೆ ನಿರ್ಬಂಧ ಹೇರಲಾಗಿತ್ತು. ಆ ಸಮಯದಲ್ಲಿ ಶಸ್ತçಚಿಕಿತ್ಸೆಗೆ ತುಂಬಾ ತೊಂದರೆ ಆಗಿತ್ತು ಎಂದು ತಿಳಿಸಿದರು.

ವೀರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ ಮಾತನಾಡಿ, ಅಪಘಾತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ನಾವು ವೈದ್ಯರಿಗೆ ಆ ವ್ಯಕ್ತಿಗೆ ರಕ್ತ ನೀಡಬೇಕು ಎಂದು ಕೇಳುತ್ತೇವೆ. ವೈದ್ಯರು ಅಗತ್ಯವಾದ ರಕ್ತ ನೀಡಲು ಹೇಳುತ್ತಾರೆ. ರಕ್ತವೂ ಸಿಗುತ್ತದೆ. ಆದರೆ ಆ ರಕ್ತ ಎಲ್ಲಿಂದ ಹೇಗೆ ಬರುತ್ತದೆ ಎಂದು ನಮಗೆ ಗೊತ್ತಿರುವುದಿಲ್ಲ. ಒಟ್ಟಾರೆ ವ್ಯಕ್ತಿಯನ್ನು ಉಳಿಸುವ ಪ್ರಯತ್ನ ನಡೆಸುತ್ತೇವೆ. ಆದರೆ ಅಗತ್ಯವಾದ ಸಮಯದಲ್ಲಿ ರಕ್ತ ನೀಡಲು ಈ ರೀತಿಯ ರಕ್ತದಾನ ಶಿಬಿರದಿಂದ ಮಾತ್ರ ಸಾಧ್ಯ, ಕೆಲವು ರಕ್ತದ ಗುಂಪು ಸಿಗುವುದು ಬಹಳ ವಿರಳ. ಅಂತಹ ಸಂದರ್ಭದಲ್ಲಿ ವಿರಳವಾಗಿ ಸಿಗುವ ರಕ್ತ ದಾನಿಗಳ ನೆರವು ಇರುವುದರಿಂದ ಅವರ ಸಂಪರ್ಕ ಬಹಳ ಮುಖ್ಯ ಎಂದು ರವೀಂದ್ರ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯ ಡಾ. ಕರುಂಬಯ್ಯ ಮಾತನಾಡಿ, ಇಂತಹ ಶಿಬಿರದಿಂದ ಪಡೆದ ರಕ್ತವನ್ನು ಅದರ ಕಣಗಳನ್ನು ವಿಂಗಡಿಸಿ ಒಬ್ಬ ವ್ಯಕ್ತಿಯಿಂದ ಪಡೆದ ರಕ್ತವನ್ನು ಮೂರು ರೋಗಿಗಳಿಗೆ ನೀಡುವ ವ್ಯವಸ್ಥೆ ಇದೆ. ಹದಿನೆಂಟು ವರ್ಷದಿಂದ ಅರವತ್ತೆöÊದು ವರ್ಷದ ವ್ಯಕ್ತಿಗಳು ಆರೋಗ್ಯವಂತರಾಗಿ ರಕ್ತದಾನ ಮಾಡಬಹುದು, ಇದರಲ್ಲಿ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುನೀರ್ ಅಹಮದ್ ವಹಿಸಿದ್ದರು.

ಇದೇ ಸಂದರ್ಭ ಐವತ್ತು ಬಾರಿ ರಕ್ತದಾನ ಮಾಡಿದ ಪೊಲೀಸ್ ರಾಮಪ್ಪ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಮಾಡಲಾಯಿತು. ವೀರಾಜಪೇಟೆ ರಕ್ತದಾನ ಗ್ರೂಪ್‌ನ ಎಡ್ಮಿನ್‌ಗಳಾದ ಅಡ್ಡುಫೈಜಲ್ ಹಾಗೂ ಗ್ರೂಪ್‌ನ ಸದಸ್ಯರುಗಳು ಸೇರಿದಂತೆ ರಕ್ತದಾನಿಗಳು ಇದ್ದರು.