ಸುಂಟಿಕೊಪ್ಪ, ಡಿ. ೨೭: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಆತನ ಎಡಗಾಲಿನ ಮೂಳೆ ಮುರಿಯಲ್ಪಟ್ಟ ಘಟನೆ ತಾ. ೨೫ರ ರಾತ್ರಿ ಬೋಯಿಕೇರಿಯಲ್ಲಿ ನಡೆದಿದೆ. ಬೋಯಿಕೇರಿ ನಿವಾಸಿ ರವಿ ಎಂಬವರ ಪುತ್ರ ಮಂಜುನಾಥ (ಮಂಜು) ಎಂಬಾತ ಬೋಯಿಕೇರಿಯ ಹೆದ್ದಾರಿ ಬದಿಯಲ್ಲಿ ಕಾರನ್ನು ನಿಲ್ಲಿಸಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ, ಸುಂಟಿಕೊಪ್ಪ ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ (ಕೆಎ-೭೦ ಎಂ೨೭೮೪) ಆಲ್ಟೋ ಕಾರು ಅತಿವೇಗದಿಂದ ಬಂದು ಮಂಜುಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಎಡಗಾಲಿನ ಮೂಳೆ ಮುರಿದಿದೆ. ಗಾಯಾಳುವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ. ಕಾರು ಚಾಲಕನ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.