ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹ: ಹಲವರ ಬಂಧನ

ಬೆAಗಳೂರು, ಡಿ. ೨೭: ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ಕ.ರ.ವೇ. ಅಧ್ಯಕ್ಷ ನಾರಾಯಣ ಗೌಡ ಸೇರಿ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಬೆಳಿಗ್ಗೆ ೧೧ ಗಂಟೆಗೆ ಕರವೇ ಕಾರ್ಯಕರ್ತರು ದೇವನಹಳ್ಳಿಯ ಸಾದಹಳ್ಳಿ ಟೋಲ್‌ನಿಂದ ಬೆಂಗಳೂರು ಕಬ್ಬನ್ ಪಾರ್ಕ್ವರೆಗೆ ರ‍್ಯಾಲಿ ಆರಂಭಿಸಿದ್ದರು. ಅಲ್ಲದೆ, ಕಾರ್ಯಕರ್ತರು ನಗರದ ವಿವಿಧೆಡೆ ವಿಶೇಷವಾಗಿ ವ್ಯಾಪಾರ ಕೇಂದ್ರಗಳಾದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಚಾಮರಾಜಪೇಟೆ, ಚಿಕ್ಕಪೇಟೆ, ಕೆಂಪೇಗೌಡ ರಸ್ತೆ, ಗಾಂಧಿ ನಗರ, ಸೇಂಟ್ ಮಾರ್ಕ್ಸ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ರೆಸಿಡೆನ್ಸಿ ರಸ್ತೆ, ಕೆ.ಆರ್. ಪುರಂ, ಹೆಬ್ಬಾಳದಲ್ಲಿ ರ‍್ಯಾಲಿ ನಡೆಸಿದರು. ಇದರಂತೆ ಲಾವೆಲ್ಲೆ ರಸ್ತೆ ಮತ್ತು ಯುಬಿಸಿಟಿ ಸುತ್ತಮುತ್ತಲು ಕ.ರ.ವೇ. ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಇಂಗ್ಲೀಷ್‌ನಲ್ಲಿದ್ದ ಕೆಲವು ಬೋರ್ಡ್ಗಳಿಗೆ ಕಪ್ಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರು ಮಾತನಾಡಿ, ಮಾಲ್ ಆಫ್ ಏಷ್ಯಾ ಮಾಲೀಕರು ಮತ್ತು ಇತರ ಮಾಲ್ ಮಾಲೀಕರು ಶೇ. ೬೦ ಕನ್ನಡ ನಾಮಫಲಕ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇವರು ಪೊಲೀಸರ ರಕ್ಷಣೆ ತೆಗೆದುಕೊಂಡಿರಬಹುದು. ಆದರೆ, ನಿಯಮಗಳನ್ನು ಪಾಲಿಸದಿದ್ದರೆ, ಕನ್ನಡಕ್ಕೆ ಆದ್ಯತೆ ನೀಡದಿದ್ದರೆ, ಕ.ರ.ವೇ ಕಾರ್ಯಕರ್ತರು ಆಸ್ತಿಪಾಸ್ತಿಗಳನ್ನು ನಾಶಪಡಿಸುತ್ತಾರೆಂದು ಎಚ್ಚರಿಸಿದರು. ಇದೇ ವೇಳೆ ದೇವನಹಳ್ಳಿ ಟೋಲ್ ಗೇಟ್ ಬಳಿ ಪೊಲೀಸರು ನಾರಾಯಣ ಗೌಡ ಮತ್ತು ರಾಜ್ಯ ಕಾರ್ಯದರ್ಶಿ ಸಣ್ಣ ಈರಪ್ಪ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡರು. ನಿನ್ನೆಯಷ್ಟೇ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. ೬೦ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಭೆ ನಡೆಸಿ, ೧೫ ದಿನಗಳಲ್ಲಿ ಕನ್ನಡ ನಾಮಫಲಕಗಳ ಹಾಕುವಂತೆ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಿದ್ದರು.

ಯತ್ನಾಳ್‌ಗೆ ಬಿಜೆಪಿ ಖಡಕ್ ವಾರ್ನಿಂಗ್

ಬೆAಗಳೂರು, ಡಿ. ೨೭: ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಮತ್ತು ಪಕ್ಷದ ಘನತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಬುಧವಾರ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ೪೦,೦೦೦ ಕೋಟಿ ರೂಪಾಯಿ ಕೋವಿಡ್ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ ನಂತರ ರಾಜೀವ್ ಈ ಹೇಳಿಕೆ ನೀಡಿದ್ದಾರೆ. ಯತ್ನಾಳ್ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೀವ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಇಂದು ನಡೆದ ಕರ್ನಾಟಕ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದಲ್ಲಿನ ಇತ್ತೀಚಿನ ಎಲ್ಲಾ ಬೆಳವಣಿಗೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಈ ಬಗ್ಗೆ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಅಪಘಾತ ಪರಿಹಾರ ಹೆಚ್ಚಳ

ಬೆಂಗಳೂರು, ಡಿ. ೨೭: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತ ಪರಿಹಾರ ನಿಧಿ ಟ್ರಸ್ಟ್ ನೀಡುವ ಪರಿಹಾರವನ್ನು ಜನವರಿ ೧, ೨೦೨೪ ರಿಂದ ಜಾರಿಗೆ ಬರುವಂತೆ ೩ ಲಕ್ಷದಿಂದ ೧೦ ಲಕ್ಷಕ್ಕೆ ಹೆಚ್ಚಿಸಿದೆ. ಅಪಘಾತಕ್ಕೀಡಾದವರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ನೀಡಲು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ರೂ. ೫೦ ರಿಂದ ೯೯ ಮತ್ತು ರೂ. ೧೦೦ ಟಿಕೆಟ್ ಮೌಲ್ಯದ ಪ್ರಯಾಣಿಕರಿಂದ ತಲಾ ರೂ. ೧ ಮತ್ತು ಅದಕ್ಕಿಂತ ಮೇಲ್ಟಟ್ಟ ಟಿಕೆಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕ ರಿಂದ ತಲಾ ರೂ. ೨ ಸಂಗ್ರಹಿಸಲಾಗುತ್ತದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ. ಜನವರಿ ೧, ೨೦೨೪ ರಿಂದ ಅಪಘಾತ ಪರಿಹಾರ ನಿಧಿ ಟ್ರಸ್ಟ್ಗೆ ಮೊತ್ತವನ್ನು ಸಂಗ್ರಹಿಸಲಾಗುತ್ತದೆ. ಈ ಹಿಂದೆ, ೧೦೦ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ೧ ರೂಪಾಯಿ ಮೊತ್ತವನ್ನು ಪರಿಹಾರ ನಿಧಿಗೆ ಸಂಗ್ರಹಿಸಲಾಗುತ್ತಿತ್ತು. ಅಂತೆಯೇ ರೂ. ೧ ರಿಂದ ರೂ. ೪೯ ರ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಯಾವುದೇ ಅಪಘಾತ ಪರಿಹಾರ ನಿಧಿಯ ಕೊಡುಗೆಯನ್ನು ಸಂಗ್ರಹಿಸಲಾಗುವುದಿಲ್ಲ ಎಂದು ನಿಗಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಮೇರಿಕಾದಲ್ಲಿ ಭೀಕರ ಅಪಘಾತ: ಆಂಧ್ರದ ೬ ಮಂದಿ ಸಾವು

ನವದೆಹಲಿ, ಡಿ. ೨೭: ಅಮೇರಿಕಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಶಾಸಕರೊಬ್ಬರ ೬ ಮಂದಿ ಸಂಬAಧಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಮೇರಿಕಾದ ಟೆಕ್ಸಾಸ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಶಾಸಕ ಪಿ. ವೆಂಕಟ ಸತೀಶ್ ಕುಮಾರ್ ಅವರ ಆರು ಮಂದಿ ಸಂಬAಧಿಕರು ಮೃತಪಟ್ಟಿದ್ದಾರೆ. ಮೃತರನ್ನು ಶಾಸಕರ ಚಿಕ್ಕಪ್ಪ ನಾಗೇಶ್ವರ ರಾವ್, ಸೀತಾ ಮಹಾಲಕ್ಷಿö್ಮ, ನವೀನ, ಕೃತಿಕ್ ಮತ್ತು ನಿಶಿತಾ ಎಂಬ ಯುವತಿ ಎಂದು ಗುರುತಿಸಲಾಗಿದೆ. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಸ್ಥಳೀಯ ಮೃಗಾಲಯಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಟೆಕ್ಸಾಸ್‌ನ ಕ್ಲೆಬೂರ್ನ್ ನಗರದ ಜಾನ್ಸನ್ ಕೌಂಟಿಯಲ್ಲಿ ಎದುರಿನಿಂದ ಬಂದ ಟ್ರಕ್, ಕಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಏಳು ಮಂದಿ ಪೈಕಿ ಆರು ಮಂದಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡ ಲೋಕೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶಾಸಕ ವೆಂಕಟ ಸತೀಶ್ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಭಾರತಕ್ಕೆ ತರಲು ಉತ್ತರ ಅಮೇರಿಕಾದ ತೆಲುಗು ಅಸೋಸಿಯೇಷನ್ ಸಂಘಟನೆ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಮುಮ್ಮಿಡಿವರಂ ಕ್ಷೇತ್ರದ ಶಾಸಕರಾದ ಸತೀಶ್ ಕುಮಾರ್, "ನಾವು ಮೃತದೇಹಗಳನ್ನು ದೇಶಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ ಲೋಕೇಶ್ ಇನ್ನೂ ಚಿಕಿತ್ಸೆ ಪಡೆಯುತ್ತಿರುವುದರಿಂದ, ತಡವಾಗುತ್ತಿದೆ. ಶವಗಳ ಹಸ್ತಾಂತರ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸತೀಶ್ ಕುಮಾರ್ ಹೇಳಿದರು. ಟ್ರಕ್‌ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಟ್ರಕ್ ಚಾಲನೆ ಮಾಡುತ್ತಿದ್ದವರ ಅಚಾತುರ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಅಮೇರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಬಿಸಿಯೂಟ ಸೇವಿಸಿ ೬೦ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಚಿತ್ರದುರ್ಗ, ಡಿ. ೨೭: ಬಿಸಿಯೂಟ ಸೇವಿಸಿ ೬೦ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಬೀರಾವರ ಗ್ರಾಮದಲ್ಲಿ ನಡೆದಿದೆ. ಮಕ್ಕಳಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದರಿAದ ತೀವ್ರ ಸುಸ್ತಾಗಿದ್ದರು. ಹೀಗಾಗಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೀರಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ಅನ್ನ ಸಾಂಬಾರ್ ಊಟ ಮಾಡಿದ್ದರು. ಸುಮಾರು ೬೦ ಮಕ್ಕಳಿಗೆ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದಾರೆ. ಇನ್ನು ಕೆಲ ಮಕ್ಕಳಿಗೆ ಮೂಗಿನಲ್ಲಿ ರಕ್ತಸ್ರಾವವಾಗಿದೆ. ಹೀಗಾಗಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಪ್ರತ್ಯೇಕ ವಾರ್ಡ್ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ವಾಂತಿ-ಭೇದಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬAದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಶಾಲೆಯಲ್ಲಿ ಮಧ್ಯಾಹ್ನ ೧೨.೪೫ಕ್ಕೆ ಈ ಮಕ್ಕಳಿಗೆ ಬಿಸಿಯೂಟ ನೀಡಲಾಗಿತ್ತು. ಊಟ ಸೇವಿಸಿದ ಒಂದೂವರೆ ಗಂಟೆಯ ಬಳಿಕ ನಾಲ್ವರು ವಿದ್ಯಾರ್ಥಿಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಬಳಿಕ ಮತ್ತೆ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರಿಂದ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಶಾಲೆ ಮುಗಿಸಿ ಮನೆಗೆ ಮರಳಿದ ಬಳಿಕ ಮತ್ತಷ್ಟು ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಎಲ್ಲ ೩೯ ಮಕ್ಕಳು ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ. ಕಲುಷಿತ ಆಹಾರ ಸೇವಿನೆಯಿಂದ ಈ ತೊಂದರೆ ಉಂಟಾಗಿರುವ ಸಾಧ್ಯತೆ ಇದೆ. ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತçಚಿಕಿತ್ಸಕ ಡಾ. ರವೀಂದ್ರ ಸ್ಪಷ್ಟಪಡಿಸಿದ್ದಾರೆ.