ಪಾಲಿಬೆಟ್ಟ, ಡಿ. ೨೬: ಪರಿಸರ ಹಾಗೂ ಸಮಾಜ ಸೇವೆಯ ಸಾಧನೆಗಾಗಿ ರಾಜ್ಯಮಟ್ಟದ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಭಾಜನರಾದ ಮೂಕೊಂಡ ವಿಜು ಸುಬ್ರಮಣಿ ಅವರನ್ನು ಪಾಲಿಬೆಟ್ಟದ ಆಟೋ ಚಾಲಕರು, ಮಾಲೀಕರು ಸನ್ಮಾನಿಸಿ ಗೌರವಿಸಿದರು.

ಮಹಿಳಾ ಸಭಾಂಗಣದಲ್ಲಿ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಚಾಲಕ ಲಿಗೋರಿ ವೇಗಸ್ ಮಾತನಾಡಿ, ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಅಪಾರ ಸೇವೆ ಮಾಡಿದ್ದಾರೆ. ವಿಜು ಸುಬ್ರಮಣಿ ಅವರ ಸೇವೆಗೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಚಾಲಕರ ಸಹಕಾರದಿಂದಲೇ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಯಿತು. ಚಾಲಕರು ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯಬೇಕೆಂದು ವಿಜು ಸುಬ್ರಮಣಿ ಸಲಹೆ ನೀಡಿದರು. ಈ ಸಂದರ್ಭ ಆಟೋ ಚಾಲಕರ ಹಾಗೂ ಮಾಲೀಕರುಗಳಾದ ರಾಜಪ್ಪ, ವಿನು, ನಾರಾಯಣ, ದೂಜ ವೇಗಶ್, ಉದ್ಯಮಿಗಳಾದ ಟಿ.ಜಿ.ವಿಜೇಶ್, ತ್ರಿನೇಶ್ ಮತ್ತಿತರರು ಹಾಜರಿದ್ದರು.