ಭಾಗಮಂಡಲ, ಡಿ. ೨೬: ಪ್ರತಿ ಬಾರಿ ಗೊಂದಲದ ಗೂಡಾಗಿ ಮಾರ್ಪಡುತ್ತಿದ್ದ ಭಾಗಮಂಡಲದ ಗ್ರಾಮ ಸಭೆಯು ಈ ಬಾರಿ ಚರ್ಚೆ ವಿಮರ್ಶೆಗಳೊಂದಿಗೆ ನಡೆದು ಕೆಲವೊಂದು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಭಾಗಮಂಡಲದ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೋಡಲ್ ಅಧಿಕಾರಿ ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ ಉಪಸ್ಥಿತಿಯಲ್ಲಿ ಸಭೆ ಆರಂಭವಾಗುತ್ತಿದ್ದAತೆ ತ್ರಿವೇಣಿ ಸಂಗಮದಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಕೆಲಸ ಕಾರ್ಯಗಳು ಆಗುತ್ತಿವೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಇದರಿಂದ ಭಕ್ತರಿಗೆ ತೊಂದರೆ ಆಗಲಿದೆ. ಕಾಮಗಾರಿ ಬಗ್ಗೆ ಪಂಚಾಯಿತಿಯ ಗಮನಕ್ಕೆ ಬಂದಿಲ್ಲವೇ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪುರುಷೋತ್ತಮ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ನಾವು ಈ ಬಗ್ಗೆ ಆಡಳಿತಾಧಿಕಾರಿ ಮತ್ತು ಇಂಜಿನಿಯರುಗಳನ್ನು ವಿಚಾರಿಸಿದಾಗ ನಮಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದರು.
ಶಕ್ತಿಪತ್ರಿಕೆಯಲ್ಲಿ ಬಂದ ವರದಿಗೆ ಪೂರಕವಾಗಿ ಮತ್ತಾರಿ ರಾಜ ಮಾತನಾಡಿ ಈ ಪ್ರದೇಶದಲ್ಲಿ ಮಾಡುವ ಕಾಮಗಾರಿ ನಮಗೆ ಪೂರಕವಾಗಿದೆಯೆ ಇಲ್ಲವೇ ಎಂದು ಅಧಿಕಾರಿಗಳು ಸ್ಥಳೀಯರೊಂದಿಗೆ ಚರ್ಚಿಸಿ ಮಾಡಬೇಕಿತ್ತು. ಇಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡುವ ಅಗತ್ಯವಾದರೂ ಏನಿದೆ? ಇಲ್ಲಿ ಸ್ನಾನ ಮಾಡುವ ಸಂದರ್ಭ ಬೇರೆಯವರು ನೋಡಬಾರದು ಎಂದು ಎಲ್ಲರಿಗೂ ಹೇಳುತ್ತೇವೆ. ಕೆಲವರು ತೆಳ್ಳಗಿನ ಬಟ್ಟೆ ಧರಿಸಿ ನೀರಿನಲ್ಲಿ ಮಿಂದು ಮೈಗಂಟಿದ ಬಟ್ಟೆಯಲ್ಲಿ ಧಾರ್ಮಿಕ ಕ್ರಿಯೆ ಕೈಗೊಳ್ಳುತ್ತಾರೆ. ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತದೆ.
(ಮೊದಲ ಪುಟದಿಂದ) ಮಳೆಗಾಲದಲ್ಲಿ ಪ್ರವಾಹ ಬಂದು ಕೆಸರು ನೀರು ತುಂಬಿರುತ್ತದೆ. ಮಣ್ಣು ಮಿಶ್ರಿತ ನೀರಿನಲ್ಲಿ ಬಿದ್ದು ಅನಾಹುತವಾದರೆ ಹೊಣೆ ಯಾರು? ಒಬ್ಬರೇ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡದೆ ಕಾಮಗಾರಿ ಆರಂಭಿಸಿರುವು ದೇಕೆ? ಕಾಮಗಾರಿ ಬಗ್ಗೆ ಸ್ಥಳೀಯರ, ಪಂಚಾಯಿತಿಯ ಗಮನಕ್ಕೆ ತಾರದಿರುವುದೇಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಕುಮಾರ್ ಮಾತನಾಡಿ ಆಡಳಿತ ಅಧಿಕಾರಿಗಳನ್ನು ವಿಚಾರಿಸಿದರೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಿರಿ ಎಂದು ಉತ್ತರಿಸಿದ್ದಾರೆ. ಹಾಗಾದರೆ ಆಡಳಿತಾಧಿಕಾರಿ ಗಮನಕ್ಕೆ ಬಾರದೆ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದಾದರೆ ಆಡಳಿತಾಧಿಕಾರಿ ಇರುವುದಾದರೂ ಏಕೆ ಎಂದು ಪ್ರಶ್ನಿಸಿದರು.ಸುನಿಲ್ ಪತ್ರಾವೋ ಮಾತನಾಡಿ ಈ ಹಿಂದೆ ಭಾಗಮಂಡಲದ ಅಭಿವೃದ್ಧಿ ಕೆಲಸವು ದೇವಸ್ಥಾನಕ್ಕೆ ಸಂಬAಧಪಟ್ಟ ಹಾಗೆ ಆಗಿದೆ. ಆದರೆ ಸ್ಥಳೀಯರ ಭಕ್ತರ ಗಮನಕ್ಕೆ ತಂದಿದ್ದಾರೆಯೇ ಎಂಬುದು ಪ್ರಶ್ನೆ. ಇಂದಿನ ಸಭೆಯಲ್ಲಿ ಗ್ರಾಮ ಪಂಚಾಯಿತಿ ಒಂದು ನಿರ್ಣಯ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಯ ಪ್ರಮುಖರು ಹಾಗೂ ಒಂದಿಷ್ಟು ಪ್ರಮುಖರನ್ನು ಒಗ್ಗೂಡಿಸಿ ಸಭೆ ನಡೆಸಲಿ. ಅಲ್ಲಿ ಚರ್ಚಿಸಿ ಕಾಮಗಾರಿ ನಡೆಸುವ ತೀರ್ಮಾನ ಆಗಲಿ. ಜೊತೆಗೆ ಸಾಧಕ ಬಾದಕಗಳನ್ನು ಶಾಸಕರ ಗಮನಕ್ಕೆ ತರುವಂತಾಗಲಿ ಎಂದರು.
ಪವಿತ್ರ ಕ್ಷೇತ್ರ ಭಾಗಮಂಡಲ ಭಾವನಾತ್ಮಕ ಆಗಿರುವುದರಿಂದ ಸ್ನಾನ ಮಾಡುವುದನ್ನು ಕುಳಿತು ನೋಡುವುದು ಸರಿಯಲ್ಲ ಎಂದರು. ಇದಕ್ಕೆ ಧನಿಗೂಡಿಸಿದ ರಾಜೀವ್ ಸಂಗಮಕ್ಕೆ ನಮ್ಮವರೇ ಆದ ಭಕ್ತರು ಬರುತ್ತಾರೆ. ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಪದ್ಧತಿ ಇದೆ. ಇವರನ್ನು ನೋಡಲು ಆಸನ ವ್ಯವಸ್ಥೆ ಮಾಡಿಕೊಡುವುದು ಸರಿಯಲ್ಲ. ಆದುದರಿಂದ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು.
ಗ್ಲಾಸ್ ಬ್ರಿಡ್ಜ್ ಬೇಕು
ಮತ್ತಾರಿ ರಾಜ ಮಾತನಾಡಿ ಗ್ರಾಮ ಪಂಚಾಯಿತಿಯಿAದ ಅನುಮತಿ ಪತ್ರ ಪಡೆದು ತಲಕಾವೇರಿಯಲ್ಲಿ ಗ್ಲಾಸ್ ಬ್ರಿಡ್ಜ್ ಕೆಲಸ ಆರಂಭಿಸಿದ್ದು ಇದೀಗ ಜಿಲ್ಲಾಧಿಕಾರಿ ಅವರಿಗೆ ಒತ್ತಡ ಹೇರಿ ತಡೆ ಹಿಡಿದಿದ್ದಾರೆ. ಜಿಲ್ಲಾಧಿಕಾರಿ ಏಕೀಕರಣ ರಂಗದ ಹಿಡಿತದಲ್ಲಿ ಇದ್ದಾರೆಯೇ? ಗ್ಲಾಸ್ ಬ್ರಿಡ್ಜ್ ಆಗುತ್ತಿರುವುದು ಕನ್ವರ್ಷನ್ ಲ್ಯಾಂಡ್ ಮತ್ತು ಅವರ ಸ್ವಂತ ಜಾಗದಲ್ಲಿ. ಹಾಗಾದರೆ ಏಕೀಕರಣ ರಂಗಕ್ಕೆ ಆಗುವ ನಷ್ಟ ಏನು ಎಂದರು. ರಾಜೀವ್ ಪ್ರತಿಯಾಗಿ ಮಾತನಾಡಿ ಇಲ್ಲಿ ಯಾವುದೇ ಮೂಲ ಸೌಕರ್ಯಕ್ಕೆ ಧಕ್ಕೆ ಇಲ್ಲ. ಭಾಗಮಂಡಲದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ತಡೆ ಏಕೆ? ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಬೇಕಾದಷ್ಟು ಇದ್ದರೂ ಈ ಕ್ಷೇತ್ರವನ್ನೇ ಟಾರ್ಗೆಟ್ ಮಾಡುವ ಉದ್ದೇಶವಾದರೂ ಏನು? ಜಿಲ್ಲೆಯಲ್ಲಿ ಮರಹನನ, ರೆಸಾರ್ಟುಗಳು ರಾಜಾರೋಷವಾಗಿ ನಡೆದರೆ ಇವರಿಂದ ತಡೆ ಒಡ್ಡಲು ಸಾಧ್ಯವಿಲ್ಲ. ಭಾಗಮಂಡಲದ ಅಭಿವೃದ್ಧಿಗೆ ತಕರಾರು ಏಕೆ ಎಂದರು. ಇದಕ್ಕೆ ಗ್ರಾಮಸ್ಥರು ಒಮ್ಮತದಿಂದ ಗ್ಲಾಸ್ ಬ್ರಿಡ್ಜ್ ಕಾಮಗಾರಿ ಆಗಬೇಕು. ಹಾಗೆ ತಡೆ ಒಡ್ಡಿದರೆ ಒಂದುಗೂಡಿ ಹೋರಾಟಕ್ಕೆ ಸಿದ್ದರಿದ್ದೇವೆ ಎಂದರು. ಈ ಬಗ್ಗೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಯವರಿಗೆ ಕಳುಹಿಸಿ ಎಂದು ಹೇಳುವುದರೊಂದಿಗೆ ಒಂದು ಸಂಘಟನೆಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುವುದಾದರೆ ಪ್ರತಿಭಟನೆಗೆ ಸಿದ್ಧರಿದ್ದೇವೆ ಎಂದರು ಎಂಬ ತೀರ್ಮಾನಕ್ಕೆ ಬರಲಾಯಿತು.
ಈ ಸಂದರ್ಭ ಸತೀಶ್ ಕುಮಾರ್ ಮಾತನಾಡಿ ಅವರ ಸ್ವಂತ ಜಾಗದಲ್ಲಿ ಕಾಮಗಾರಿ ಮಾಡುತ್ತಿ ದ್ದಾರೆ. ಇದಕ್ಕೆ ಏಕೆ ಆಕ್ಷೇಪ ಮಾಡಬೇಕು ? ಸಭೆಯ ಒತ್ತಾಯದ ಮೇರೆಗೆ ನಿರ್ಮಾಣಕ್ಕೆ ತಡೆಯೊಡ್ಡ ಬಾರದು ಎಂಬ ನಿರ್ಣಯ ಕೈಗೊಂಡರು.
ತಣ್ಣಿಮಾನಿ ಶಾಲೆಯಲ್ಲಿ ಮೇಲ್ಛಾವಣಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಭಾಗಮಂಡಲ ಮೇಲ್ಸೇತುವೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿ ಅವೈಜ್ಞಾನಿಕವಾಗಿ ಆಗಿದೆ ನಾಡಕಚೇರಿಯಲ್ಲಿ ಆಧಾರ್ ಬಯೋಮೆಟ್ರಿಕ್ ಇಲ್ಲದೆ ಮೂರು ತಿಂಗಳು ಕಳೆದಿದೆ. ವಾರದೊಳಗೆ ಸರಿಪಡಿಸಬೇಕು. ಭಾಗಮಂಡಲ ಸರ್ಕಾರಿ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಹೆಚ್ಚಿನ ಕ್ರಮಕೈಗೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭಾಗಮಂಡಲದಲ್ಲಿ ಶೌಚಾಲಯ ವ್ಯವಸ್ಥೆ ಸರಿಪಡಿಸಿ ಎಂಬ ಒತ್ತಾಯಗಳು ಕೇಳಿ ಬಂದವು. ಹಲವು ಅಭಿವೃದ್ಧಿ ಪರ ಚರ್ಚೆಗಳು ನಡೆದವು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ ಪಿಡಿಒ ನಂದ, ಠಾಣಾಧಿಕಾರಿ ಶೋಭಾ ಲಮಾಣಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
-ಸುನಿಲ್ ಕುಯ್ಯಮುಡಿ